      ಮೂಲದೊಡನೆ ಪರಿಶೀಲಿಸಿ

ಕರ್ಣಾಟಕದ ಖನಿಜ ನಿಕ್ಷೇಪಗಳು

ಖನಿಜಗಳ ಪ್ರಾಮುಖ್ಯ
ಯಾವ ದೇಶ ನೈಸರ್ಗಿಕ ಸಂಪತ್ತಿನಿಂದ ಹೆಚ್ಚು ಸಮೃದ್ಧವಾಗಿದೆಯೋ ಆ ದೇಶದ ಪ್ರಗತಿಯೂ ಅಷ್ಟೇ ತ್ವರಿತವಾಗಿ ಸಾಗುತ್ತದೆ ಎನ್ನುವುದಕ್ಕೆ ನಮ್ಮ ಕಣ್ಣಮುಂದೆಯೇ ಅನೇಕ ಉದಾಹರಣೆಗಳಿವೆ.  ನೈಸರ್ಗಿಕ ಸಂಪತ್ತೆಂದರೆ ನೆಲ ನೀರಷ್ಟೇ ಅಲ್ಲ, ಕೇವಲ ವನ್ಯಸಂಪತ್ತೂ ಅಲ್ಲ, ನೆಲದಡಿಯಲ್ಲಿರುವ ಖನಿಜ ಸಂಪತ್ತು ದೇಶದ ಸರ್ವಾಂಗೀಣ ಬೆಳವಣಿಗೆಯಲ್ಲಿ ವಹಿಸುವ ಪಾತ್ರ ತುಂಬ ದೊಡ್ಡದು. ಐವತ್ತು ವರ್ಷಗಳ ಹಿಂದೆ ಅತ್ಯಂತ ಸಾಧಾರಣ ಕೊಲ್ಲಿ ರಾಷ್ಟ್ರವಾಗಿದ್ದ ಸೌದಿ ಅರೇಬಿಯ ಬೆಂಗಾಡಾಗಿದ್ದರೂ ಅದರೊಳಗಿರುವ ತೈಲ ಸಂಪತ್ತಿನಿಂದಾಗಿ ಇಡೀ ಜಗತ್ತನ್ನೇ ನಿಯಂತ್ರಿಸುವಷ್ಟು ಆರ್ಥಿಕ ಪ್ರಗತಿ ಸಾದಿsಸಿದೆ. ಅಮೆರಿಕದ ಪ್ರಗತಿಯ ಬೆನ್ನೆಲುಬು ಅಲ್ಲಿನ ಖನಿಜ ಸಂಪನ್ಮೂಲ. ದಕ್ಷಿಣ ಆಫ್ರಿಕಕ್ಕೆ ಚಿನ್ನ ಮತ್ತು ವಜ್ರವೇ ಬಹುದೊಡ್ಡ ಆಸ್ತಿ. 

ಖನಿಜಗಳಿಲ್ಲದೆ ಕೈಗಾರಿಕಾ ಬೆಳವಣಿಗೆಯನ್ನು ಊಹಿಸಲೂ ಸಾಧ್ಯವಿಲ್ಲ. ನಿತ್ಯವೂ ಒಂದಲ್ಲ ಒಂದು ವಿಧದಲ್ಲಿ ನಮ್ಮ ಬದುಕು ಖನಿಜವನ್ನು ಅವಲಂಬಿಸಿದೆ. ಉಪ್ಪಿನಿಂದ ಹಿಡಿದು ಉಕ್ಕಿನ ತಯಾರಿಕೆಯವರೆಗೆ. ಅಡುಗೆ ಮನೆಯ ಸೌಟಿನಿಂದ ಹಿಡಿದು ಪರಮಾಣು ಬಾಂಬು ತಯಾರಿಕೆಯವರೆಗೆ. ರೈತ ತನ್ನ ಬೆಳೆಗಾಗಿ ಹಾಕುವ ರಸಗೊಬ್ಬರಕ್ಕೆ ಕಚ್ಚಾ ವಸ್ತು ಭೂಮಿಯಿಂದಲೇ ಬರಬೇಕು. ಪ್ರಗತಿಯ ಚಕ್ರವನ್ನೇ ಉರುಳಿಸುವ ಪೆಟ್ರೋಲ್ ಇಂದು ಯಂತ್ರಯುಗದ ಜೀವನಾಡಿಯಾಗಿದೆ. ಕಬ್ಬಿಣವಿಲ್ಲದೆ ನಮ್ಮ ನಿತ್ಯಜೀವನ ಮುಂದೆ ಸಾಗುವುದೇ ಇಲ್ಲ. ಖನಿಜಗಳು ಭೂಪದರದಲ್ಲಿದ್ದರೆ ಸಾಲದು, ಅವುಗಳನ್ನು ಗಣಿ ಮಾಡಿ, ಪರಿಸರ ಹಾಳಾಗದಂತೆ ಹೊರತೆಗೆದು ಯುಕ್ತ ರೀತಿಯಲ್ಲೇ ಬಳಕೆ ಮಾಡಿಕೊಂಡಾಗ ಮಾತ್ರ ಕೈಗಾರಿಕಾಭಿವೃದ್ಧಿ ಸಾಧ್ಯ. ಭಾರತದಲ್ಲಿ ಖನಿಜ ಸಂಪನ್ಮೂಲ ಹೇರಳವಾಗಿರುವ ಅನೇಕ ರಾಜ್ಯಗಳಿವೆ. ಕೆಲಮೊಂದು ರಾಜ್ಯಗಳಲ್ಲಿ ನಿರ್ದಿಷ್ಟ ಬಗೆಯ ಖನಿಜಗಳು ಹೇರಳವಾಗಿವೆ. ಉದಾಹರಣೆಗೆ ಬಿಹಾರ, ಬಂಗಾಳ, ಮಧ್ಯಪ್ರದೇಶ, ಆಂಧ್ರದ ಕೆಲವು ಭಾಗ, ತಮಿಳುನಾಡಿನ ಕೆಲವು ಭಾಗಗಳಲ್ಲಿ ಕಲ್ಲಿದ್ದಲು ದೊರೆಯುತ್ತದೆ. ದೇಶದ ಅನೇಕ ರಾಜ್ಯಗಳಲ್ಲಿ ಹೇರಳ ಸುಣ್ಣ ನಿಕ್ಷೇಪವಿದೆ. ಚಿನ್ನವೆಂದೊಡನೆ ಕರ್ನಾಟಕದ ಹೆಸರೇ ಮೊದಲು ಕೇಳಿ ಬರುತ್ತದೆ. ಸೀಸ, ಸತುವು, ರಾಜಸ್ತಾನದ ವಿಶಿಷ್ಟ ಸಂಪನ್ಮೂಲ. ಒರಿಸ್ಸಾ, ಮಧ್ಯಪ್ರದೇಶ, ಕಬ್ಬಿಣ ನಿಕ್ಷೇಪಗಳಿಗೆ ಹೆಸರುವಾಸಿ. ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ವಜ್ರದ ತವರೆಂದೇ ಖ್ಯಾತಿಯಾಗಿದೆ.

ಕರ್ನಾಟಕ ವಿಸ್ತೀರ್ಣಕ್ಕೆ ತಕ್ಕಂತೆ ಅನೇಕ ಬಗೆಯ ಲೋಹ, ಅಲೋಹ, ರತ್ನ ಖನಿಜಗಳ ಭಂಡಾರವನ್ನೇ ಹೊಂದಿದೆ.  ಚಿನ್ನದ ನಾಡಿದು ಮೈಸೂರು ಗಂಧದ ಗುಡಿಯಿದು ಮೈಸೂರು ಎಂಬ ಅಭಿದಾನ ಉತ್ಪ್ರೇಕ್ಷೆಯಲ್ಲ. ಚಿನ್ನದ ಉದ್ಯಮವನ್ನೇ ಪ್ರಾಚೀನ ಕಾಲದಿಂದಲೂ ಬೆಳೆಸಿದ ಕೀರ್ತಿ ನಮ್ಮ ನಾಡಿಗಿದೆ. ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಅಲ್ಯೂಮಿನಿಯಮ್, ಕ್ರೋಮೈಟ್ ನಿಕ್ಷೇಪಗಳು ನಮ್ಮ ನಾಡಿನ ಕೈಗಾರಿಕಾಭಿವೃದ್ಧಿಯ ಪಥವನ್ನೇ ಬದಲಿಸಿದೆ. ಕಬ್ಬಿಣ ಮತ್ತು ಕ್ರೋಮೈಟ್ ನಿಕ್ಷೇಪಗಳನ್ನು ನಿರ್ಯಾತ ಮಾಡುವ ಸ್ಥಿತಿಯಲ್ಲಿ ರಾಜ್ಯವಿದೆ. ಚನ್ನಪಟ್ಟಣ, ಮೈಸೂರು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಕೆಂಪು ಎಂಬ ರತ್ನ ಖನಿಜ ಗಣನೀಯ ಪ್ರಮಾಣದಲ್ಲಿ ದೊರೆಯುತ್ತಿದೆ. ಚನ್ನಪಟ್ಟಣ ರತ್ನೋದ್ಯಮದ ಗುಡಿ ಕೈಗಾರಿಕೆಯನ್ನು ರೂಢಿಸಿಕೊಂಡಿರುವುದು ಖನಿಜಗಳ ಪ್ರಾಮುಖ್ಯವನ್ನು ಸಾರುತ್ತದೆ.

ಚಿನ್ನ

ವೈಶಿಷ್ಟ್ಯ : ಚಿನ್ನ, ರಾಜರ ಲೋಹ - ಲೋಹಗಳ ರಾಜ ಎಂಬ ವಿಶೇಷಣಕ್ಕೆ ಪಾತ್ರವಾದ ಲೋಹ. ರಾಜ ಮಹಾರಾಜರು ತಮ್ಮ ಟಂಕಸಾಲೆಯಲ್ಲಿ ಚಿನ್ನದ ಮೊಹರನ್ನು ಮುದ್ರಿಸುತ್ತಿದ್ದರು. ಚಿನ್ನದ ನಾಣ್ಯ ಚಲಾವಣೆಯಲ್ಲಿತ್ತು. ಆಭರಣವಾಗಿ ಚಿನ್ನ ಎಂದೂ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡೇ ಬಂದಿದೆ. ಚಿನ್ನದ ಕಾಂತಿಗೆ ಬೇರೆ ಹೋಲಿಕೆಯೇ ಇಲ್ಲ. ಕಾಲ ಕಳೆದಂತೆ ಇತರ ಲೋಹಗಳು ಮಂಕಾಗಬಹುದು, ಚಿನ್ನ ತನ್ನ ಹೊಂಬಣ್ಣವನ್ನು ಎಂದೂ ಕಳೆದುಕೊಳ್ಳುವುದೇ ಇಲ್ಲ. ಚಿನ್ನ ತುಂಬ ಸಾಂದ್ರವಾದ ಲೋಹ. ವಿಶಿಷ್ಟ ಸಾಂದ್ರತೆ 19.32 ಅಂದರೆ ನೀರಿಗಿಂತ ಇಷ್ಟು ಪಟ್ಟು ಭಾರ. ಒಂದು ಟನ್ನು ಚಿನ್ನ 1.86 ಘನ ಅಡಿ ಗಾತ್ರವಿರುತ್ತದೆ ಅಷ್ಟೇ. ಅಂದರೆ ಚಿಕ್ಕ ಟಿ.ವಿ. ಪೆಟ್ಟಿಗೆಯಷ್ಟು. ಕಳೆದ ಆರು ಸಾವಿರ ವರ್ಷಗಳಿಂದ ಗಣಿ ಮಾಡಿರುವ ಚಿನ್ನವೆಲ್ಲವನ್ನೂ ಕರಗಿಸಿ ಗಟ್ಟಿ ಮಾಡಿದರೆ 20 ಘನ ಮೀಟರಿನ ಗಟ್ಟಿಯಾಗುತ್ತದೆ ಅಷ್ಟೇ. ಒಂದು ಟನ್ನು ತೂಕದ ಚಿನ್ನದಿಂದ ಭೂಮಿಯಿಂದ ತಂತಿ ಎಳೆಯುತ್ತ ಚಂದ್ರನನ್ನು ಮುಟ್ಟಿ ಮತ್ತೆ ಭೂಮಿಗೆ ತರಬಹುದು. ಈ ಗುಣವೇ ಚಿನ್ನದ ತನ್ಯತೆ.  ಒಂದು ಔನ್ಸ್ ಚಿನ್ನದಿಂದ (31 ಗ್ರಾಂ) 1600 ಕಿಲೋಮೀಟರು ಉದ್ದದ ತಾಮ್ರದ ತಂತಿಯ ಮೇಲೆ ಲೇಪ ಮಾಡಬಹುದು. ಈಜಿಪ್ಟ್‍ನ ಅಕ್ಕಸಾಲಿಗರು ಒಂದು ಅಂಗುಲ ಮಂದದ ಚಿನ್ನದ ತಗಡಿನಿಂದ 2,50,000 ತೆಳು ರೇಖುಗಳನ್ನು ಬಿಡಿಸುತ್ತಿದ್ದರಂತೆ. ಒಂದು ಔನ್ಸ್ ಚಿನ್ನವನ್ನು ಬಡಿದು ಹತ್ತು ಚದರ ಮೀಟರು ನೆಲವನ್ನು ರತ್ನಗಂಬಳಿಯಂತೆ ಹಾಸಿ ಸಿಂಗರಿಸಬಹುದು. ರಾಜದ್ರವದಲ್ಲಿ ಮಾತ್ರ ಚಿನ್ನ ಕರಗುತ್ತದೆ (ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲದ ಮಿಶ್ರಣ 3:1). ಚಿನ್ನದ ಶ್ರೇಷ್ಟತೆಯನ್ನು ವೇದಗಳು ಎತ್ತಿ ಹಿಡಿದಿವೆ. ಲಕ್ಷ್ಮಿಯನ್ನು  `ಹಿರಣ್ಯವರ್ಣಾಂ ಹರಿಣೀಂ` ಎಂದೇ ಸ್ತುತಿಸುತ್ತ ಋಗ್ವೇದದ ಶ್ರೀಸೂಕ್ತ ಪ್ರಾರಂಭವಾಗುತ್ತದೆ. ಅಮರಸಿಂಹನ ಅಮರಕೋಶದ ವೈಶ್ಯವರ್ಗದಲ್ಲಿ ಚಿನ್ನಕ್ಕೆ 23 ಹೆಸರುಗಳನ್ನು ನೀಡಲಾಗಿದೆ. ಬೈಬಲ್ಲಿನಲ್ಲಿ (2-2-10) ಈಡನ್‍ನಲ್ಲಿ ಹುಟ್ಟುವ ನದಿಯೊಂದು ಚಿನ್ನದ ನಾಡನ್ನು ತೋರಿಸುತ್ತದೆ ಎಂಬ ಉಲ್ಲೇಖ ಉಂಟು. 

ನಾಣ್ಯ ಟಂಕಿಸಿವುದು, ಆಭರಣ ತಯಾರಿಸುವುದು ಮುಂತಾದುವೇ ಅಲ್ಲದೆ ಚಿನ್ನ ಬೇರೆ ಬೇರೆ ಕ್ಷೇತ್ರದಲ್ಲೂ ಉಪಯುಕ್ತವಾಗಿ ಪರಿಣಮಿಸಿದೆ. ಪಿಂಗಾಣಿ ಸಾಮಾನುಗಳ ಮೇಲೆ ಸೂಕ್ಷ್ಮ ಕಲಾತ್ಮಕ ಚಿತ್ರ ಬಳಸಲು ಕಲಿಲ ಸ್ಥಿತಿಯ ಚಿನ್ನ ಬಳಸುತ್ತಾರೆ. ಬೆಳ್ಳಿಗೆ ಚಿನ್ನದ ಲೇಪ ಮಾಡಬಹುದು.  ಹಾಗೆಯೇ ಕ್ಷಿಪಣಿ ಮತ್ತು ರಾಕೆಟ್‍ಗಳ ಹೊರ ಭಾಗಗಳಿಗೂ ಚಿನ್ನದ ಗಿಲಾವು ಮಾಡುವುದುಂಟು. ಹೀಗೆ ಮಾಡುವುದರಿಂದ ಅತಿರಕ್ತ ಕಿರಣಗಳು ಪ್ರತಿಫಲಿತವಾಗುತ್ತವೆ. ಎಲೆಕ್ಟ್ರಾನ್ ಸಂಪರ್ಕಗಳಲ್ಲಿ ಚಿನ್ನದ ಬಳಕೆ ಇದೆ. ಅರೆವಾಹಕಗಳಿಗೆ ಚಿನ್ನದ ಲೇಪ ಮಾಡಿ ಅದನ್ನು ಆದ್ರ್ರತೆಯಿಂದ ರಕ್ಷಿಸಬಹುದು. ಮುಕ್ಕಾದ ಹಲ್ಲುಗಳನ್ನು ಚಿನ್ನದಿಂದ ಭರ್ತಿ ಮಾಡಲು ದಂತವೈದ್ಯಕೀಯದಲ್ಲಿ ವಿಶ್ವಾದ್ಯಂತ ಪ್ರತಿವರ್ಷ 50 ಟನ್ನು ಚಿನ್ನವನ್ನು ಬಳಸಲಾಗುತ್ತಿದೆ. ಸ್ವರ್ಣ ಭಸ್ಮ ಗುಳಿಗೆ ತಯಾರಿಸಲು ವಾರ್ಷಿಕ 600 ರಿಂದ 1000 ಕಿಲೋಗ್ರಾಂ ಚಿನ್ನ ಬಳಕೆಯಾಗುತ್ತಿದೆ. ಕೈಗಾರಿಕೆಗಳ ಸೂಕ್ಷ್ಮ ಭಾಗಗಳನ್ನು ತಯಾರಿಸಲು ಇಷ್ಟೇ ಪ್ರಮಾಣದ ಚಿನ್ನವನ್ನು ಭಾರತದಲ್ಲಿ ಬಳಸಲಾಗುತ್ತಿದೆ. ಸೀರೆಯ ಜರಿ ತಯಾರಿಕೆಯಲ್ಲೂ ಚಿನ್ನದ ಬಳಕೆ ಇದೆ. ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚಾಗಿ ಆಭರಣ ತಯಾರಿಕೆಯಲ್ಲಿ ವಾರ್ಷಿಕ 2000 ಟನ್ನು ಚಿನ್ನ ಬಳಕೆಯಾಗುತ್ತಿದೆ. ಚಿನ್ನವನ್ನು ವಿಶೇಷವಾಗಿ ಭಾರತದಲ್ಲಿ ಆಪದ್ಧನ ಎಂದೇ ಭಾವಿಸಲಾಗಿದೆ. ತಮ್ಮ ದಾಸ್ತಾನಿನಲ್ಲಿರುವ ಚಿನ್ನವನ್ನು ಮಾರಿ ಸರ್ಕಾರ ಸಂಕಷ್ಟದಿಂದ ಪಾರಾದ ಉದಾಹರಣೆಯೂ ನಮ್ಮಲ್ಲಿದೆ.

ಚಿನ್ನ ದೊರೆಯುವ ಬಗೆ:

ಚಿನ್ನ ಸಾಮಾನ್ಯವಾಗಿ ನೈಸರ್ಗಿಕ ಸ್ಥಿತಿಯಲ್ಲಿ ದೊರೆಯುತ್ತದೆ. ಈ ಬಗೆಯಲ್ಲಿ ದೊರೆಯುವ ಚಿನ್ನವನ್ನು ಮೂಲ ಚಿನ್ನ ಎಂದು ಕರೆಯುತ್ತಾರೆ. ಇದರಲ್ಲೂ ಬೆಳ್ಳಿ ಬೆರೆತಿರುತ್ತದೆ. ಚಿನ್ನದಲ್ಲಿ ಬೆಳ್ಳಿಯ ಪ್ರಮಾಣ ಶೇ. 20ಕ್ಕಿಂತಲೂ ಹೆಚ್ಚಾಗಿದ್ದರೆ ಅದನ್ನು ಎಲೆಕ್ಟ್ರಮ್ ಎನ್ನುತ್ತಾರೆ. ಕೋಲಾರದ ಚಿನ್ನ ಈ ಬಗೆಯದು. ಮೂಲ ಚಿನ್ನ ಸಣ್ಣ ಶಿರ ರೂಪದಲ್ಲಿ ರೂಪಾಂತರಿತ ಅಗ್ನಿ ಶಿಲೆಯಲ್ಲಿ ಬೆಣಚಿನೊಡನೆ ದೊರೆಯುತ್ತದೆ.  ಆದರೆ ಎಲ್ಲ ಸಂದರ್ಭದಲ್ಲೂ ಬೆಣಚಿನೊಡನೆ ಇರಬೇಕೆಂದೇನೂ ಇಲ್ಲ. ಅಥವಾ ಎಲ್ಲ ಬೆಣಚೂ ಸ್ವರ್ಣಭರಿತವಲ್ಲ. ಇತ್ತೀಚೆಗೆ ಅಗ್ನಿಶಿಲೆಗಳಲ್ಲೇ ಅಲ್ಲದೆ ಪಟ್ಟೆಯುಳ್ಳ ಕಬ್ಬಿಣಯುಕ್ತ ಜಲಜ ಶಿಲೆಗಳಲ್ಲೂ ಚಿನ್ನವಿರುವುದು ಪತ್ತೆಯಾಗಿದೆ. ನದಿ ಹೊತ್ತು ತಂದ ಮೆಕ್ಕಲಿನಲ್ಲೂ ಚಿನ್ನ ಸಂಗ್ರಹವಾಗುತ್ತದೆ. ಈ ಬಗೆಯಲ್ಲಿ ದೊರೆಯುವ ಚಿನ್ನವನ್ನು ಮೆಕ್ಕಲು ಚಿನ್ನ ಎಂದು ಕರೆಯುತ್ತಾರೆ. 

ಮೂಲ ಚಿನ್ನವನ್ನು ಪಡೆಯಲು ನೆಲದಾಳದಲ್ಲಿ ಕೂಪ ಸುರಂಗಗಳನ್ನು ತೋಡಬೇಕು. ಆರ್ಥಿಕ ದೃಷ್ಟಿಯಿಂದ ಬೆಣಚಿನೊಡನೆ ಬೆರೆತ ಚಿನ್ನದ ಶಿರಗಳು ಹೆಚ್ಚು ಆಕರ್ಷಕ. ಹಟ್ಟಿ ಮತ್ತು ಕೋಲಾರದಲ್ಲಿ ಚಿನ್ನ ಈ ಬಗೆಯಲ್ಲಿ ದೊರೆಯುತ್ತದೆ. ಇದಲ್ಲದೆ ಆಂಫಿಬೊಲೈಟ್ ಎಂಬ ರೂಪಾಂತರಿತ ಅಗ್ನಿಶಿಲೆಯಲ್ಲೂ ಸಲ್ಫೈಡ್ ಖನಿಜವಿರುವ ಚರ್ಟ್ ಶಿಲೆಯಲ್ಲೂ ದೊರೆಯುವುದುಂಟು.  ಕೋಲಾರದ ಚಿನ್ನದ ಗಣಿಗಳ ಪೈಕಿ ಓರಿಯೆಂಟಲ್ ಎಂಬ ಗಣಿಯಲ್ಲಿ ಚಿನ್ನ ಸಲ್ಫೈಡ್ ಖನಿಜಗಳೊಂದಿಗೆ ದೊರೆಯುತ್ತದೆ. ಚಿತ್ರದುರ್ಗದ ಇಂಗಳದಾಳು, ಹಾಸನದ ಕಲ್ಯಾಣಿಯಲ್ಲಿ ಚರ್ಟ್‍ನೊಂದಿಗೆ ತಾಮ್ರ, ಚಿನ್ನ, ಬೆಳ್ಳಿ, ಕೊಬಾಲ್ಟ್ ಮತ್ತು ನಿಕ್ಕಲ್ ಲೋಹಗಳು ಬೆರೆತಿರುವುದು ಕಂಡು ಬಂದಿದೆ.

ಬಳ್ಳಾರಿಯ ಸಂಡೂರು, ಕೋಲಾರದ ಮಲ್ಲಪ್ಪನಕೊಂಡ, ತುಮಕೂರಿನ ಅಜ್ಜನಹಳ್ಳಿ, ಹಾವೇರಿ ಬಳಿಯ ಚಿನ್ನ ಮುಳುಗುಂದ ಮುಂತಾದ ಭಾಗಗಳಲ್ಲಿ ಕಬ್ಬಿಣಯುಕ್ತ ಪಟ್ಟೆಶಿಲೆಯೊಂದಿಗೆ ಚಿನ್ನವಿರುವುದು ಪತ್ತೆಯಾಗಿದೆ. ಕರ್ನಾಟಕದ ಬಲು ಭಾಗದಲ್ಲಿ ಈ ಬಗೆಯ ಶಿಲೆಗಳಿರುವುದರಿಂದ ಹೊಸ ನಿಕ್ಷೇಪಗಳನ್ನು ಗುರುತಿಸಲು ಇವು ಭರವಸೆ ನೀಡಿವೆ. 

ಕಬ್ಬಿಣಯುಕ್ತ ಪಟ್ಟೆಶಿಲೆಯಲ್ಲಿ ಸಲ್ಫೆಡ್ ಖನಿಜಗಳ ಜೊತೆಗೆ ಮೂಲ ಚಿನ್ನವಿದ್ದು ಇಂಥ ಶಿಲೆಗಳು ವಿಶಿಷ್ಟ ವಾತಾವರಣದಲ್ಲಿ ಜಮ್ಮಿಟ್ಟಿಗೆ ಮಣ್ಣಾಗಿ ರೂಪುಗೊಳ್ಳುವುದುಂಟು. ಈ ಪ್ರಕ್ರಿಯೆಯಲ್ಲಿ ಚಿನ್ನ ಮೂಲ ಶಿಲೆಯಿಂದ ಬಿಡುಗಡೆಯಾಗಿ ಜಮ್ಮಿಟ್ಟಿಗೆ ಮಣ್ಣಿನಲ್ಲಿ ಸಂಗ್ರಹವಾಗಿ ಆರ್ಥಿಕವಾಗಿ ಲಾಭದಾಯಕವಾದ ನಿಕ್ಷೇಪವಾಗಿ ರೂಪುಗೊಳ್ಳಬಹುದು. ಕುದುರೆಮುಖದ ಕಬ್ಬಿಣದ ಅದುರಿನಲ್ಲಿ ಕೋಲಾರದ ಉತ್ತರ ಭಾಗದ ಜಮ್ಮಿಟ್ಟಿಗೆ ಮಣ್ಣಿನಲ್ಲಿ ಚಿನ್ನವಿರುವುದು ಕಂಡುಬಂದಿದೆ. ಆದರೆ ಭಾರಿ ಪ್ರಮಾಣದ ಚಿನ್ನದ ಗಣಿಗಳು ಆಧರಿಸಿರುವುದು ಬೆಣಚಿನೊಡನೆ ಬೆರೆತ ಮೂಲ ಚಿನ್ನದ ನಿಕ್ಷೇಪವನ್ನು. ಇದರ ಜೊತೆಗೆ ನಿಸರ್ಗವೇ ಕೆಲವು ಪ್ರಕ್ರಿಯೆಗಳಿಂದ ಮೆಕ್ಕಲಿನಲ್ಲಿ ಚಿನ್ನ ಸಂಗ್ರಹವಾಗುವಂತೆ ಮಾಡುತ್ತವೆ. 

ಮೆಕ್ಕಲು ಚಿನ್ನವನ್ನು ದ್ವೀತೀಯಕ ಚಿನ್ನವೆಂದೂ ಕರೆಯುವುದುಂಟು. ಸಾಮಾನ್ಯವಾಗಿ ಶಿಲೆಗಳು ಸದಾ ಗಾಳಿ, ಮಳೆ, ಬಿಸಿಲಿಗೆ ತುತ್ತಾಗುತ್ತವೆ. ಕ್ರಮೇಣ ಶಿಥಿಲವಾಗುತ್ತವೆ. ಶಿಥಿಲವಾದ ಶಿಲಾ ಚೂರುಗಳು ಗಾಳಿ ಮೂಲಕವೋ ಅಥವಾ ನದಿ ಮೂಲಕವೋ ಸಾಗಣೆಯಾಗುತ್ತವೆ. ಹೀಗೆ ಸಾಗಣೆಯ ಹಂತದಲ್ಲಿ ಶಿಲಾಚೂರುಗಳ ತಿಕ್ಕಾಟದಿಂದ, ಹಾಸುಗಲ್ಲಿನ ಮೇಲೆ ಉಜ್ಜುವುದರಿಂದ ಚಿನ್ನದ ಕಣಗಳು ಬೇರ್ಪಡೆಯಾಗುತ್ತವೆ. ಗಾಳಿ ಅಥವಾ ಹರಿಯುವ ನೀರಿಗೆ ತಡೆಯುಂಟಾದಾಗ ಭಾರ ಲೋಹ ಖನಿಜಗಳು ನಿಧಾನವಾಗಿ ಸಂಚಯನವಾಗತೊಡಗುತ್ತವೆ. ಇಂಥ ಸಂಚಯನದಲ್ಲಿ ಚಿನ್ನವೂ ಶೇಖರವಾಗುತ್ತದೆ. ಕರ್ನಾಟಕದಲ್ಲಿ ಕೆಲವು ನದಿಗಳ ಮೆಕ್ಕಲಿನಲ್ಲಿ  ಚಿನ್ನವಿರುವುದು ಕಂಡುಬಂದಿದೆ. ವಿಶೇಷವಾಗಿ ತುಂಗಾ ಮತ್ತು ಭದ್ರಾ ನದಿಗಳ ಮೆಕ್ಕಲಿನಲ್ಲಿ ಚಿನ್ನದ ಕಣಗಳು ಸಂಗ್ರಹವಾಗಿರುವುದನ್ನು ಬಹು ಹಿಂದೆಯೇ ಗುರುತಿಸಲಾಗಿತ್ತು. ಮೆಕ್ಕಲು ಚಿನ್ನವನ್ನು ಸಂಗ್ರಹಿಸುವುದು ಸುಲಭ. ಇದಕ್ಕಾಗಿ ಆಳವಾದ ಗಣಿ ಕಾರ್ಯಾಚರಣೆ ಮಾಡಬೇಕಾದುದಿಲ್ಲ. ಆದರೆ ಲಾಭದಾಯಕ ನಿಕ್ಷೇಪ ರೂಪುಗೊಳ್ಳಬೇಕಾದರೆ ನದಿಯಲ್ಲಿ ಸದಾ ನೀರು ಹರಿಯುತ್ತಿರಬೇಕು. ಅದು ಹೊಸ ಹೊಸ ಶಿಲಾ ಚೂರುಗಳನ್ನು ಹೊತ್ತು ತರಬೇಕು.  ಮಳೆಗಾಲದಲ್ಲಿ ಪ್ರವಾಹ ಬಂದು ಬೇಸಗೆಯಲ್ಲಿ ಬತ್ತಿಹೋದರೆ ಈ ಹಿಂದೆ ಸಂಚಯನವಾಗಿದ್ದ ಚಿನ್ನವು ಕೊಚ್ಚಿ ಹೋಗಿಬಿಡುತ್ತದೆ. ಶಿವಮೊಗ್ಗದ ಹೊನ್ನಾಳಿ ಬಳಿಯ ಕುದುರೆಕೊಂಡ ಮತ್ತು ಫಲವನಹಳ್ಳಿ ಸುತ್ತಮುತ್ತ 1907ರಲ್ಲಿ ನಾಲ್ಕೂವರೆ ಔನ್ಸ್ ತೂಕದ ಚಿನ್ನದ ಗಟ್ಟಿಯೇ ದೊರೆತಿತ್ತು. 1940ರಲ್ಲೂ ಒಂದು ತೆಂಗಿನಕಾಯಿ ಗಾತ್ರದ ಬೆಣಚು ಕಲ್ಲಿನೊಡನೆ ಬೆರೆತ ಚಿನ್ನದ ಮುದ್ದೆ ತುಂಗಾ ನದಿಯ ಮೆಕ್ಕಲಿನಲ್ಲಿ ದೊರೆತಿತ್ತು. ಚಿನ್ನವನ್ನು ಮೆಕ್ಕಲಿನಿಂದ ಶೋಧಿಸಿ ತೆಗೆಯುವ ತಂತ್ರವನ್ನು ರೂಢಿಸಿಕೊಂಡಿರುವ ಜಾಲಗಾರ ಕುಟುಂಬಗಳೇ ಹಿಂದೆಲ್ಲ ಕರ್ನಾಟಕದಲ್ಲಿ ತುಂಬ ಹೆಸರಾಗಿದ್ದವು. ಸುವರ್ಣಮುಖಿ, ಸುವರ್ಣನದಿ, ಸುವರ್ಣರೇಖೆ, ಹೊನ್ನಹೊಳೆ ಇವೆಲ್ಲ ಮೆಕ್ಕಲು ಚಿನ್ನವನ್ನು ರೂಪಿಸಿರುವ ನದಿಗಳಿಗೆ ನೀಡಿರುವ ಹೆಸರು. ವಿಶೇಷವಾಗಿ ಹೊನ್ನೆಹಟ್ಟಿ, ಹೊನ್ನಾಳಿ, ಕುದುರೆಕೊಂಡ ಮುಂತಾದ ಹಳ್ಳಿಗಳಲ್ಲಿ ಹಿಂದೆ ಜಾಲಗಾರರು ವ್ಯಾಪಕವಾಗಿ ಮೆಕ್ಕಲನ್ನು ಜಾಲಿಸಿ ಚಿನ್ನವನ್ನು ಸೋಸಿ ತೆಗೆಯುತ್ತಿದ್ದರು. ಈಗಲೂ ಗದುಗಿನ ಸುತ್ತ ಮುತ್ತ ಇರುವ ಪುರಾತನ ಚಿನ್ನದ ಗಣಿಗಳಿಂದ ಮಣ್ಣನ್ನು ತಂದು ಲಂಬಾಣಿಗರು ಚಿನ್ನವನ್ನು ಸೋಸಿ ತೆಗೆಯುತ್ತಿದ್ದಾರೆ. ಜಗತ್ತಿನ ಶೇ. 20 ಪ್ರಮಾಣದ ಚಿನ್ನದ ಉತ್ಪಾದನೆ ಮೆಕ್ಕಲಿನ ಮೂಲದಿಂದ ಬರುತ್ತದೆ.

ಕರ್ನಾಟಕದಲ್ಲಿ ಗಣಿಗಾರಿಕೆ

ಕರ್ನಾಟಕದ ಚಿನ್ನದ ಗಣಿಗಾರಿಕೆಗೆ ಅತ್ಯಂತ ಪ್ರಾಚೀನ ಇತಿಹಾಸವಿದೆ. ಕ್ರಿ.ಪೂ. ವರ್ಷಗಳಲ್ಲೇ ನಮ್ಮ ನಾಡಿನಲ್ಲಿ ಚಿನ್ನವನ್ನು ಗಣಿ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಚಿನ್ನ ದೊರೆಯುವ ಶಿಲೆಗಳ ಬಗ್ಗೆ ಪ್ರಾಚೀನರಿಗೆ ಸ್ಪಷ್ಟ ತಿಳಿವಿತ್ತು. ಈ ಹಿನ್ನೆಲೆಯಲ್ಲಿ ಭೂಮಿಯೊಳಗೆ ಕೂಪ ತೋಡಿ, ಆಳವಾದ ಭಾಗಗಳನ್ನು ಪರಿಶೋಧಿಸಿ ಚಿನ್ನವನ್ನು ಗಣಿ ಮಾಡಿದ್ದಾರೆ. ಹಾಗೆಯೇ ಮೆಕ್ಕಲು ಚಿನ್ನವನ್ನು ಸೋಸಿ ತೆಗೆದಿದ್ದಾರೆ. ಲಭ್ಯ ದಾಖಲೆಗಳ ಪ್ರಕಾರ ರೋಮ್‍ನ ಚರಿತ್ರೆಕಾರ ಪ್ಲನಿ ( ಕ್ರಿ.ಶ. 77), ಮೌಂಟ್ ಅಬೂ ಪರ್ವತದಿಂದ ಆಚೆಗಿರುವ ನಾಯರ್ ದೇಶದಲ್ಲಿ ಚಿನ್ನದ ಗಣಿಗಳಿವೆ ಎಂದು ಬರೆದಿದ್ದಾನೆ. ಬಹುಶಃ ಇದು ವೈನಾಡು, ಹೈದರಾಬಾದ್, ಕರ್ನಾಟಕವನ್ನೊಳಗೊಂಡ ಪ್ರದೇಶವಿರಬಹುದೆಂದು ಚರಿತ್ರೆಕಾರರು ಊಹಿಸಿದ್ದಾರೆ. ಏಕೆಂದರೆ ರಾಜಸ್ತಾನದ ಆ ಭಾಗದಲ್ಲಿ ಸತುವು ಮತ್ತು ಸೀಸದ ಗಣಿಗಳು ದೊಡ್ಡ ಪ್ರಮಾಣದಲ್ಲಿವೆ. ಚಿನ್ನದ ಗಣಿಗಳು ಪ್ರಧಾನವಾಗಿರುವುದು ದಕ್ಷಿಣ ಭಾರತದಲ್ಲೇ.

ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ಪ್ರಸ್ತಾಪಿಸಿರುವ ಸುವರ್ಣಗಿರಿ ಎನ್ನುವ ಹೆಸರು ರಾಯಚೂರಿನ ಮಸ್ಕಿಯ ಬಳಿಯ ಸ್ವರ್ಣಭರಿತ ಗುಡ್ಡಗಳನ್ನು ಕುರಿತೇ ಇರಬಹುದೆಂದು ಆಲ್ಚಿನ್ ಎಂಬ ಇತಿಹಾಸಕಾರ ಅಭಿಪ್ರಾಯಪಡುತ್ತಾರೆ. ಬಹುಶಃ ನವಶಿಲಾಯುಗದಲ್ಲಿ ಎಂದರೆ ಕ್ರಿ.ಪೂ. 3ನೇ ಸಹಸ್ರಮಾನದ ಕೊನೆಯಲ್ಲಿ ಪ್ರಾರಂಭವಾಗಿ 1ನೇ ಸಹಸ್ರಮಾನದ ಮೊದಲಾರ್ಧದವರೆಗೆ ಸಣ್ಣ ಪ್ರಮಾಣದಲ್ಲಿ ಚಿನ್ನದ ಗಣಿಗಾರೆಕೆ ಪ್ರಾರಂಭವಾಗಿರಬಹುದು ಆನಂತರ ಮೌರ್ಯರು ದಖನ್ ಪ್ರಾಂತ್ಯವನ್ನು ಆಳುವ ಹೊತ್ತಿಗೆ ಚಿನ್ನದ ಗಣಿಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆದಿರಲು ಸಾಧ್ಯ. ಮಸ್ಕಿ, ಮುದಗಲ್, ಸಿಂಗಸಗೂರು, ಕೋಟೆಗಲ್ಲು, ವಾಟೆಗಲ್ಲು ಮುಂತಾದಡೆ ನವ ಶಿಲಾಯುಗದ ಅನೇಕ ಕುರುಹುಗಳು ಪತ್ತೆಯಾಗಿವೆ. ಹಟ್ಟಿ ಸುತ್ತಮುತ್ತಲಿರುವ ಪುರಾತನ ಚಿನ್ನದ ಗಣಿಗಳನ್ನು ಕುರಿತು ಹೈದರಾಬಾದ್ ನಿಜಾಮ್ ಸರ್ಕಾರಕ್ಕೆ ಭೂವಿಜ್ಞಾನ ಸಲಹೆಗಾರನಾಗಿದ್ದ ಕ್ಯಾಪ್ಟನ್ ಲಿಯೋನಾರ್ಡ್ ಮನ್ ಎಂಬಾತ ಸಮೀಕ್ಷೆ ನಡೆಸಿ ಗಣಿಗಳ ಪ್ರಾಚೀನ ಇತಿಹಾಸ ಸಾರುವ ಅಮೂಲ್ಯ ಮಾಹಿತಿಯನ್ನು ನೀಡಿದ್ದಾನೆ.

ದಕ್ಷಿಣ ಭಾರತದಲ್ಲಿರುವ ಪ್ರಾಚೀನ ಚಿನ್ನದ ಗಣಿಗಳಿಂದ ಒಂದು ಅಂಶ ನಿಚ್ಚಳವಾಗಿ ತಿಳಿಯುತ್ತದೆ. ಎಲ್ಲೆಲ್ಲಿ ಚಿನ್ನಭರಿತ ಶಿಲೆಗಳಿವೆಯೋ ಅದರಲ್ಲಿ ಎರಡು ಮೂರು ಔನ್ಸ್‍ಗಿಂತ ಹೆಚ್ಚು ಚಿನ್ನವಿರುವ ಅದುರಿದ್ದರೆ ಅವು ಪ್ರಾಚೀನರ ಕಣ್ಣನ್ನು ತಪ್ಪಿಸಿಕೊಂಡಿಲ್ಲ. ಗಣಿಯಲ್ಲಿ ಅದುರನ್ನು ತೆಗೆಯಲು ಬೆಂಕಿಯ ಕಾವು ಕೊಟ್ಟು ಗಣಿ ಮಾಡುವ ತಂತ್ರ ಆಗಲೇ ರೂಢಿಯಲ್ಲಿತ್ತು. ಕೆಲವೆಡೆ ಗಣಿಗಳನ್ನು ತೀರ ಆಳಕ್ಕೆ ತೋಡಲು ಅಂತರ್ಜಲ ಒಸರುತ್ತಿದ್ದುದರಿಂದ ಅರ್ಧಕ್ಕೆ ಕೈ ಬಿಟ್ಟಿರುವ ನಿದರ್ಶನಗಳಿವೆ. ಆದರೆ ಹಟ್ಟಿಯ ಸುತ್ತಮುತ್ತ ಅತ್ಯಂತ ಆಳವಾದ ಪ್ರಾಚೀನ ಚಿನ್ನದ ಗಣಿಗಳಿವೆ. ಭಾರತದಲ್ಲಷ್ಟೇ ಅಲ್ಲ, ಜಗತ್ತಿನಲ್ಲೇ ಅತ್ಯಂತ ಆಳದ ಪ್ರಾಚೀನ ಚಿನ್ನದ ಗಣಿ ಹಟ್ಟಿಯಲ್ಲಿದೆ ಎಂದು ತಜ್ಞರು ವರದಿ ಮಾಡಿದ್ದಾರೆ.  ಕ್ರಿ.ಶ. 906ರಲ್ಲಿ ಮೆಕ್ಲರಾನ್ ಎಂಬ ಭೂವಿಜ್ಞಾನಿ ಹಟ್ಟಿಯ ಸುತ್ತಮುತ್ತ 300ಕ್ಕಿಂತಲೂ ಮಿಗಿಲು ಪ್ರಾಚೀನ ಚಿನ್ನದ ಗಣಿಗಳಿವೆ ಎಂದು ತಿಳಿಸಿದ್ದಾನೆ. ಹಟ್ಟಿಯ ಗಣಿಗಳಲ್ಲಿ ಪ್ರಾಚೀನರು ಬಳಸಿದ ಕಬ್ಬಿಣದ ಬಾಣಲೆ, ಕಲ್ಲಿನ ಪೀಠ, ಮಡಕೆಯ ಚೂರುಗಳು ಮುಂತಾದವು ದೊರೆತಿವೆ. ಈ ಪುರಾವೆಗಳನ್ನು ಆಧರಿಸಿ ಪ್ರಾಚ್ಯ ಸಂಶೋಧಕರು ಇವು ಮೊದಲನೇ ಸಂಸ್ಥಾನಕ್ಕೆ ಸೇರಿವೆ ಎಂದು ಕಾಲನಿರ್ಣಯ ಮಾಡಿದ್ದಾರೆ. ಇದೇ ಬಗೆಯ ಗಣಿ ಸಾಮಗ್ರಿಗಳು, ಮಡಕೆ ಚೂರುಗಳು ಕೋಲಾರದ ಚಿನ್ನದ ಗಣಿಗಳಲ್ಲಿ ಒಂದಾದ ಮೈಸೂರು ಗಣಿಯನ್ನು ಆಳಪಡಿಸುವಾಗ ದೊರೆತವು. ಅಲ್ಲಿನ ಗಣಿ ವಸ್ತು ಸಂಗ್ರಹಾಲಯದಲ್ಲಿ ಇವುಗಳನ್ನು ರಕ್ಷಿಸಿ ಇಟ್ಟಿದ್ದಾರೆ. ರಾಟೆಗಳ ಮೂಲಕ ಚಿನ್ನದ ಅದುರನ್ನು ಎತ್ತಿ ಹೊರತೆಗೆದು ಕಲ್ಲಿನ ಮೇಲೆ ಅರೆದು ಸಣ್ಣಗೆ ಪುಡಿ ಮಾಡುವ ತಂತ್ರವನ್ನು ಪ್ರಾಚೀನರು ಅನುಸರಿಸಿದ್ದಾರೆ. ಕರ್ನಾಟಕದಾದ್ಯಂತ ಪ್ರಾಚೀನದ ಗಣಿಗಳ ಸುತ್ತಮುತ್ತ ಚಿನ್ನದ ಅದುರನ್ನು ಪುಡಿಮಾಡಲು ಬಳಸುತ್ತಿದ್ದ ರುಬ್ಬುಗುಂಡುಗಳು, ಬಂಡೆಗಳ ಮೇಲೆ ಮೂಡಿಸಿರುವ ಕುಳಿಗಳು ಸಾಕಷ್ಟು ಲಭ್ಯವಿವೆ. ಹತ್ತಿರದ ಹೊಳೆಯ ಬಳಿ ಪುಡಿ ಮಾಡಿದ ಅದುರನ್ನು ಜಾಲಿಸಿ, ಚಿನ್ನವನ್ನು ಸಾಂದ್ರತೆಯ ಆಧಾರದ ಮೇಲೆ ಸುಲಭವಾಗಿ ಸಂಗ್ರಹಿಸುತ್ತಿದ್ದರು. ವಿಶೇಷವಾಗಿ ಹಟ್ಟಿ ಚಿನ್ನದ ಗಣಿಗಳಲ್ಲಿ ಪ್ರಾಚೀನ ಗಣಿಗಾರಿಕೆಯ ಅನೇಕ ಕುರುಹುಗಳು ಪತ್ತೆಯಾಗಿವೆ. ಅದುರನ್ನು ಮೇಲೆ ಎಳೆದುಕೊಳ್ಳಲು ಬಳಸುತ್ತಿದ್ದ ಹಗ್ಗಗಳಿಂದ ಶಿಲಾ ಭಿತ್ತಿಯ ಮೇಲೆ ಮೂಡಿರುವ ಗುರುತುಗಳು ಈಗಲೂ ಉಳಿದಿವೆ. ಗಣಿ ಕುಸಿದು ಬೀಳದಂತೆ ಆಸರೆಗಾಗಿ ಬಳಸುತ್ತಿದ್ದ ಗೊಬ್ಬಳಿ ಮರದ ತುಂಡುಗಳೂ ಪತ್ತೆಯಾಗಿವೆ. ಕೆಲವು ದಿಮ್ಮಿಗಳು ಗರಗಸದಿಂದ ಕೊಯ್ಯಲಾರದಷ್ಟು ಗಟ್ಟಿಯಾಗಿವೆ.
ಕರ್ನಾಟಕದ ಸ್ಥಳ ನಾಮಗಳ ವೈಶಿಷ್ಟ ್ಯವನ್ನು ಪರಿಗಣಿಸಿದಾಗ ಮತ್ತೊಂದು ಅಂಶವೂ ವಿಶೇಷವಾಗಿ ಗಮನ ಸೆಳೆಯುತ್ತದೆ. ಅಚ್ಚ ಕನ್ನಡ ನುಡಿಗಳಾದ ಚಿನ್ನ, ಹೊನ್ನು ಹೆಸರಿನ ಅನೇಕ ಸ್ಥಳಗಳು ನಮ್ಮಲ್ಲಿವೆ. ಹೊನ್ನಗಲ್ಲು, ಹೊನ್ನಾಳಿ, ಹೊನ್ನಬೆಟ್ಟ, ಹೊನ್ನೇಬಾಗಿ, ಹೊನ್ನೆಹಟ್ಟಿ, ಹೊನ್ನೆಕುಣಿ, ಹೊನ್ನದೋಣಿ ಈ ಸ್ಥಳಗಳಲ್ಲಿ ಪುರಾತನ ಚಿನ್ನದ ಗಣಿಗಳಿವೆ. ಪ್ರಾಚೀನ ಚಿನ್ನದ ಗಣಿಗಳೆಲ್ಲವೂ ಈಗ ಸುಸ್ಥಿತಿಯಲ್ಲಿಲ್ಲ. ಅನೇಕ ಗಣಿಗಳು ಗುರುತೂ ಸಿಕ್ಕದಷ್ಟು ಮುಚ್ಚಿ ಹೋಗಿದೆ. ಇನ್ನು ಕೆಲವು ಕುಸಿದು ಬಿದ್ದಿವೆ ಮತ್ತೆ ಕೆಲವದರಲ್ಲಿ ಕಲ್ಲು ಮಣ್ಣು ತುಂಬಿಕೊಂಡಿದೆ. ಹೂಳು ತೆಗೆದ ಹೊರತು ಅವು ಎಷ್ಟು ಆಳಕ್ಕಿಳಿದಿವೆ ಎಂಬ ಸಂಗತಿ ತಿಳಿಯುವುದಿಲ್ಲ. ಕೆಲವು  ಅಂಕುಡೊಂಕಾಗಿದ್ದು, ಕೇವಲ ಒಬ್ಬ ವ್ಯಕ್ತಿ ಮಾತ್ರ  ಇಳಿಯಬಹುದಾದಷ್ಟು ಕಿರಿದಾಗಿವೆ. ಬಹುತೇಕ ಪುರಾತನ ಗಣಿಗಳ ಸುತ್ತಮುತ್ತ ತಗ್ಗು  ಬಿದ್ದಿರುವುದು, ಪೊದೆ ಬೆಳೆದಿರುವುದು ಸರ್ವ ಸಾಮಾನ್ಯ ಸಂಗತಿ. ಹಟ್ಟಿಯ ಸುತ್ತಮುತ್ತ  ಇರುವ ಅನೇಕ ಪ್ರಾಚೀನ ಗಣಿಗಳ ಬಾಯಿಯನ್ನು ದೊಡ್ಡ ದೊಡ್ಡ ಗುಂಡು ಉರುಳಿಸಿ ಮುಚ್ಚಿರುವುದೂ ಉಂಟು. ಮೊಹಮದೀಯರ ಧಾಳಿಯಿಂದ ರಕ್ಷಿಸಲು ಬಹುಶಃ ಈ ತಂತ್ರ ಅನುಸರಿಸಿರಬಹುದೆಂಬ ಅಭಿಪ್ರಾಯವೂ ಇದೆ. ಖೇದವೆಂದರೆ ನಮ್ಮ ಇತಿಹಾಸದ ಯಾವ ಪುಟಗಳಾಗಲಿ, ಶಾಸನಗಳಾಗಲಿ ಕನ್ನಡ ನಾಡಿನ ಚಿನ್ನದ ಗಣಿಯ ಚರಿತ್ರೆಯನ್ನು ಸಾರುವ ಯಾವೊಂದು ಉಲ್ಲೇಖವನ್ನೂ ನೀಡುವುದಿಲ್ಲ. ಯಾವ ರಾಜರ ಚರಿತ್ರೆಯಲ್ಲೂ ಈ ಕುರಿತು ಪ್ರಸ್ತಾಪವಿಲ್ಲ. ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರಲ್ಲಿ ಯಾರೊಬ್ಬರೂ ನಮ್ಮ ನಾಡಿನ ಚಿನ್ನದ ಗಣಿಗಳನ್ನು ಕುರಿತು ಬರೆದಿಲ್ಲ.

ಕರ್ನಾಟಕದ ಚಿನ್ನದ ಗಣಿಗಳ ಪ್ರಾಚೀನತೆಯನ್ನು ಪ್ರಸಿದ್ಧ ಪ್ರಾಚ್ಯ ಸಂಶೋಧಕ ವೀಲರ್, ಸಿಂಧೂನದಿಯ ಸಂಸ್ಕøತಿಯವರೆಗೆ ವಿಸ್ತರಿಸಿದ್ದಾರೆ. ಆಲ್ಚಿನ್ ಎಂಬ ವಿದ್ವಾಂಸ ಈ ಕುರಿತು ಇನ್ನಷ್ಟು ಪುರಾವೆಗಳನ್ನು ಮುಂದಿಟ್ಟಿದ್ದಾರೆ. ಸಿಂಧೂ ನಾಗರಿಕತೆಯಲ್ಲಿ ಬಳಸಿರುವ ಬಲು ಪಾಲು ಚಿನ್ನ ಬೆಳ್ಳಿಯ ಅಂಶದಿಂದಾದ ಬಿಳಿಚಿನ್ನ (ಎಲೆಕ್ಟ್ರಮ್). ಈ ಬಗೆಯ ಚಿನ್ನ ದೊರೆಯುವುದು ಗಣಿಗಳ ಮೂಲದಿಂದಲೇ ಹೊರತು ಮೆಕ್ಕಲಿನಿಂದಲ್ಲ. ಹಟ್ಟಿಯ ಚಿನ್ನ ಈ ಬಗೆಯದು. ಇದರ ಜೊತೆಗೆ ನವಶಿಲಾಯುಗದ ಅನೇಕ ಅವಶೇಷಗಳು  ಹಟ್ಟಿ ಗಣಿಯ ಸುತ್ತಮುತ್ತ ಪತ್ತೆಯಾಗಿರುವುದನ್ನು ಇವರು ಉಲ್ಲೇಖಿಸಿದ್ದಾರೆ. ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳಲ್ಲಿ ಪ್ರಾಚೀನರು ಬಳಸಿದ್ದ  ಮರದ ಕಂಬಗಳನ್ನು  ಕಾರ್ಬನ್ 14 ಕಾಲನಿರ್ಣಯಕ್ಕೆ ಒಳಪಡಿಸಿದ್ದಾರೆ. ಈ ಅಧ್ಯಯನದ ಹಿನ್ನೆಲೆಯಲ್ಲಿ ಕೋಲಾರದ ಚಿನ್ನದ ಗಣಿಗಳನ್ನು ಈಗ್ಗೆ 700 ವರ್ಷಗಳಷ್ಟು ಮೊದಲೇ ಪ್ರಾಚೀನರು ಅಳಪಡಿಸಿದ್ದಾರೆಂಬ ಅಂಶ ಹೊರಬಿದ್ದಿದೆ. 

  ಸೀಮಿತ ಸಲಕರಣೆ ಬಳಸಿ ಇಡೀ ನಾಡಿನಾದ್ಯಂತ ಚಿನ್ನಕ್ಕಾಗಿ ವ್ಯವಸ್ಥಿತವಾಗಿ ಶೋಧನೆ ಮಾಡಿರುವ ಪ್ರಾಚೀನರು ಸ್ಥಳೀಯರೇ ಅಥವ ಹೊರಗಿನಿಂದ ಬಂದವರೇ ಎಂಬ ಬಗ್ಗೆ ಸ್ಪಷ್ಟವಾದ ದಾಖಲೆಗಳು ಇಲ್ಲ.  ಈಜಿಪ್ಟಿನಲ್ಲಿ ಹೆಚ್ಚಿನ ಪ್ರಾಚೀನ ಚಿನ್ನದ ಗಣಿಗಳಿರುವುದನ್ನು ಆಧರಿಸಿ ಎಲಿಯೆಟ್ ಸ್ಮಿತ್ ಎಂಬ ತಜ್ಞ ಪ್ರಾಯಶಃ ಆ ದೇಶದವರು ಇಲ್ಲಿನ ಚಿನ್ನದ ಗಣಿಗಾರಿಕೆಯನ್ನು ಪ್ರಾರಂಭಿಸಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಹೊರಗಿನವರಿಗೆ ಇಷ್ಟೊಂದು ವ್ಯಾಪಕವಾಗಿ, ವ್ಯವಸ್ಥಿತವಾಗಿ ಗಣಿಗಾರಿಕೆ ಮಾಡಲು ಸಮಯವಿತ್ತೇ ಎಂಬ ಪ್ರಶ್ನೆಯನ್ನು ತಜ್ಞರು ಕೇಳಿದ್ದಾರೆ. ಲಿಯೋನಾರ್ಡ್ ಮನ್ ಎಂಬ ಭೂವಿಜ್ಞಾನಿ 1936ರಲ್ಲಿ ಈ ಕುರಿತು ದೀರ್ಘ ಅಧ್ಯಯನ ಮಾಡಿದ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಆಗಿನ ಮೈಸೂರು ಪ್ರಾಂತ್ಯದಲ್ಲಿ ಮಾಡಿರುವ ಗಣಿಗಾರಿಕೆ ಆಫ್ರಿಕದಲ್ಲಿ ಚಿನ್ನದ ಗಣಿಗಳನ್ನು ಮಾಡಲು ಪ್ರೇರಣೆ ನೀಡಿರಬಹುದೆಂದು ಊಹಿಸಿದ. ರೊಡೇಷಿಯದಲ್ಲಿ ಮೈಸೂರು ಪ್ರಾಂತ್ಯದಲ್ಲಿರುವಂತೆ ಪ್ರಾಚೀನ ಚಿನ್ನದ ಗಣಿಗಳಿವೆ. ಅವುಗಳ ಆಳವೂ ಹೆಚ್ಚು ಕಡಿಮೆ ಇಲ್ಲಿರುವಷ್ಟೇ. ಅಲ್ಲದೆ ಗಣಿ ಮಾಡಿರಲು ಅನುಸರಿಸಿರುವ ತಂತ್ರದಲ್ಲೂ ಹೋಲಿಕೆಯಿದೆ. ಚಿನ್ನದ ಗಣಿಗಳ ಸುತ್ತಮುತ್ತ ಕಾಡುಹತ್ತಿ, ಹುಣಿಸೇ ಮರ ಬೆಳೆದಿರುವುದನ್ನು ಕುರಿತು ಅಲ್ಲಿನ ತಂತ್ರಜ್ಞರು 20ನೇ ಶತಮಾನದ ಪ್ರಾರಂಭದಲ್ಲೇ ವರದಿ ಮಾಡಿದ್ದರು. ಅಲ್ಲಿ ಬೆಳೆದಿರುವ ಕಾಡು ನಿಂಬೆ, ಕಾಡು ಹತ್ತಿಗಳು ಸ್ಥಳೀಯವಲ್ಲವೆಂದೂ, ಇವೆಲ್ಲ ಹಿಂದಿನ ಮೈಸೂರು ಪ್ರಾಂತ್ಯದಿಂದ (ಆಗಿನ ಹೈದರಾಬಾದು ಕರ್ನಾಟಕ ಪ್ರಾಂತ್ಯ) ಬಂದಿರಬಹುದೆಂದು ರೋಡೇಷಿಯದ ಭೂವಿಜ್ಞಾನ ಸರ್ವೇ ಸಂಸ್ಥೆಯ ಸದಸ್ಯ ಮೇಜರ್ ಲೈತ್‍ಫುಟ್ ಎಂಬ ತಜ್ಞ, ಕ್ಯಾಪ್ಟನ್ ಲಿಯೋನಾರ್ಡ್ ಮನ್‍ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. 
ಮಳೆಗಾಲದಲ್ಲಿ ಹಳೆಯ ಚಿನ್ನದ ಗಣಿಗಳಲ್ಲಿ ನೀರು ತುಂಬಿಕೊಳ್ಳುತ್ತಿತ್ತು, ಎಷ್ಟೋ ವೇಳೆ ಗಣಿಯ ದಡ ಕುಸಿದು ಪ್ರಾಣ ಹರಣವೂ ಆಗುತ್ತಿತ್ತು.  ಸರ್ಕಾರಿ ಆದಿsಕಾರಿಗಳಿಗೆ ಈ ಜಾಗಗಳನ್ನು ತೋರಿಸಲು ಸ್ಥಳೀಯರು ಹಿಂಜರಿಯುತ್ತಿದ್ದರು. ಆದರೆ ಚಿನ್ನದ ಗಣಿಗಾರಿಕೆ ಗೋಪ್ಯವಾಗಿ ನಡೆಯುತ್ತಿತ್ತು. ಹಗ್ಗ, ಬುಟ್ಟಿ, ತಟ್ಟಿ, ಕಂದೀಲು, ದುಬಾರಿಯಾಗಿದ್ದುದರಿಂದ ಚಿನ್ನವನ್ನು ಸೋಸಿ ತೆಗೆಯುವುದು ಆಗಲೂ ಲಾಭದಾಯಕ ಉದ್ಯಮವಾಗಿರಲಿಲ್ಲ. ಪೆರಿಯ ಜನಾಂಗದವರನ್ನು ಹಳೆಯ ಗಣಿಗಳಿಗೆ ಇಳಿಸಿ ಜಾನ್ ವಾರನ್ ಮೂವತ್ತು  ಪಗೋಡಾ ತೂಕದ ಚಿನ್ನವನ್ನು ಸಂಗ್ರಹಿಸಿ ಅದರ ಪರಿಶುದ್ಧತೆಯನ್ನು ನಿಖರವಾಗಿ ತಿಳಿಯಲು ಆಗಿನ ಮದ್ರಾಸಿನ ಟಂಕಸಾಲೆಗೆ ಕಳಿಸುತ್ತಿದ್ದ. ಇಲ್ಲಿನ ಚಿನ್ನ ಅತ್ಯುತ್ತಮ ಗುಣಮಟ್ಟದ್ದೆಂದು ವರದಿ ಬಂದ ಮೇಲೆ ಸರ್ಕಾರ ಈ ಉದ್ಯಮದತ್ತ ಗಮನ ಕೊಡಬೇಕೆಂದು ಶಿಫಾರಸು ಮಾಡಿದ.  ರಹಸ್ಯ ಗಣಿಗಾರಿಕೆ ಅಲ್ಲಿ ಚುರುಕುಗೊಂಡಿದ್ದರಿಂದ ಸರ್ಕಾರ ಎಚ್ಚೆತ್ತಿತು. ಗಣಿ ಕುಸಿತದಿಂದ ಹೆಚ್ಚಿನ ಸಾವು ನೋವು ಪ್ರಕರಣಗಳು ವರದಿಯಾಗುತ್ತಲೇ ಮೈಸೂರು ಕಮೀಷನರಾಗಿದ್ದ ಮಾರ್ಕ್ ಕಬ್ಬನ್, ಕೋಲಾರದ ಚಿನ್ನದ ಗಣಿ ಕಾರ್ಯಾಚರಣೆ ನಿಲ್ಲಿಸುವಂತೆ ಶಾಸನವನ್ನೇ ಹೊರಡಿಸಬೇಕಾಯಿತು. ಜಾನ್ ವಾರನ್ ತಾನು ಕೈಗೊಂಡ ಚಿನ್ನದ ಅನ್ವೇಷಣೆ ಕುರಿತು ಏಷ್ಯಾಟಿಕ್ ಜರ್ನಲ್‍ನಲ್ಲಿ ಸುದೀರ್ಘ ವರದಿಯನ್ನೇ ಪ್ರಕಟಿಸಿದ್ದಾನೆ. 

ಕೋಲಾರದ ಚಿನ್ನದ ಗಣಿಗಳ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಪ್ರಸಂಗವೊಂದಿದೆ. ಬೆಂಗಳೂರಿನ ದಂಡು ಪ್ರದೇಶದಲ್ಲಿ ವಾಸವಾಗಿದ್ದ ಐರಿಷ್ ಸೈನಿಕ ಮೈಕೇಲ್ ಲ್ಯಾವೆಲ್ಲೆ ಎಂಬಾತ ನ್ಯೂಜಿóಲೆಂಡಿನಲ್ಲಿ ಮಯೋರಿ ಯುದ್ಧದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ವಾಪಸ್ಸಾದ ನಂತರ ಚಿನ್ನದ ಗಣಿಗಾರಿಕೆಯಲ್ಲಿ ಆಸಕ್ತಿ ತಳೆದ. 1871ರಲ್ಲಿ ಕೋಲಾರದ ಚಿನ್ನದ ಗಣಿ ಪ್ರದೇಶವನ್ನು ಗೋಪ್ಯವಾಗಿ ಆಧ್ಯಯನ ಮಾಡಿದ. 1873ರಲ್ಲಿ ಆಗಿನ ಮೈಸೂರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕೋಲಾರ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ಮಾಡಲು ಪರವಾನಗಿ ಕೇಳಿದ್ದ. 1875ರಲ್ಲಿ ಸರ್ಕಾರವನ್ನು ವಂಚಿಸಿ ಮೂರು ವರ್ಷಗಳ ಕಾಲ ಗುತ್ತಿಗೆ ಪಡೆದ. 1876ರಲ್ಲಿ ತನ್ನ ಹಕ್ಕನ್ನು ಮದ್ರಾಸ್ ಸ್ಟಾಫ್ ಕ್ವಾರ್ಟರ್ಸ್‍ನ ಜನರಲ್ ಬೆರಿಸ್‍ಫರ್ಡ್ ಎಂಬುವನಿಗೆ ಮಾರಿಕೊಂಡ. ಮುಂದೆ ಈತ ಒಂದು ಸಿಂಡಿಕೇಟನ್ನು ಮಾಡಿಕೊಂಡು ಕೋಲಾರ್ ಕನ್ಸೇಷನರೀಸ್ ಎಂದು ಹೆಸರಿಟ್ಟು ಅದಕ್ಕೆ ಐದು ಸಾವಿರ ರೂಪಾಯಿ ಬಂಡವಾಳ ಹೂಡಿದ. ಈ ಸಿಂಡಿಕೇಟ್, ಆಸ್ಟ್ರೇಲಿಯದ ಇಬ್ಬರು ಗಣಿ ತಜ್ಞರನ್ನು ಬರಮಾಡಿಕೊಂಡು ಚಿನ್ನದ ಗಣಿಗಾರಿಕೆ ಪ್ರಾರಂಭಿಸಿತು. 1879ರಲ್ಲಿ ಸ್ವಲ್ಪಪ್ರಮಾಣದ ಚಿನ್ನವೂ ದೊರೆಯಿತು. ಇದರಿಂದ ಪ್ರೇರಿತವಾಗಿ ಅತ್ತ ವೈನಾಡಿನಲ್ಲಿ  ಚಿನ್ನದ ಮೇಲೆ ಹಣ ಹೂಡಿದ್ದ ಅನೇಕ ಕಂಪನಿಗಳು ಮೈಸೂರು ಪ್ರಾಂತ್ಯದತ್ತ ಸಾರಾಸಗಟಾಗಿ ಬಂದವು. 1880ರಲ್ಲಿ 35,000 ಪೌಂಡು ಬಂಡವಾಳದೊಂದಿಗೆ  ಮೈಸೂರು ಗಣಿ ಕಂಪನಿ ಅಸ್ತಿತ್ವಕ್ಕೆ ಬಂದಿತು. ಒಂದು ಲಕ್ಷ ಪೌಂಡ್ ಬಂಡವಾಳದೊಡನೆ ನಂದಿದುರ್ಗ ಕಂಪನಿ ತಲೆಯೆತ್ತಿತು. ಇವುಗಳ ಆಡಳಿತ ಕೇಂದ್ರ ಲಂಡನ್ನಿನಲ್ಲಿತ್ತು.. 1881ರ ಹೊತ್ತಿಗೆ ಕೋಲಾರದ ಚಿನ್ನದ ಗಣಿಗಳ ಮೇಲೆ ಹನ್ನೊಂದು ಕಂಪನಿಗಳು 13 ಲಕ್ಷ ಪೌಂಡ್ ಬಂಡವಾಳ ಹಾಕಿ ಬೇರೆ ಬೇರೆ ಗಣಿ ಮಾಡುತ್ತಿದ್ದವು. 1880ರಲ್ಲೇ ಉರಿಗಾಂ ಕಂಪನಿ 40 ಟನ್ನು ಅದುರನ್ನು ಅರೆದು 42 ಔನ್ಸ್ ಚಿನ್ನವನ್ನು ಸಂಗ್ರಹಿಸಿ ಆಧುನಿಕ ಗಣಿ ಉದ್ಯಮಕ್ಕೆ ಬುನಾದಿ ಹಾಕಿತು. ಪ್ರಾರಂಭಿಕ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಇಲ್ಲಿನ ಚಿನ್ನದ ಗಣಿ ಉದ್ಯಮದ ಬಗ್ಗೆ `ಬ್ರಿಟನ್ನಿನ ಗಣಿಗಳು ಮತ್ತು ಖನಿಜ' ಎಂಬ ವರದಿಯಲ್ಲಿ ರಾಲ್ಧ್ ಸ್ಟೋಕ್ಸ್ ಎಂಬ ತಜ್ಞ ಬರೆದ ಮಾತುಗಳಿವು:

`ಮೊದಲ ದುರದೃಷ್ಟ ಗಣಿಗಳಲ್ಲಿ ಕೋಲಾರದ ಗಣಿಗಳ ಹೆಸರು  ಎದ್ದು ಕಾಣುತ್ತದೆ. ಚಿನ್ನಕ್ಕೇ ಖ್ಯಾತಿಯಾಗಿದ್ದ ಕಾಲ್ಗೂರ್ಲಿ, ರ್ಯಾಂಡ್, ಬಾಲರ್ಟ್ ಗಣಿಗಳಲ್ಲಿ ಇದ್ದ ಪರಿಸ್ಥಿತಿಯೇ ಬೇರೆ. ಕಣ್ಣಿಗೆ ಕಾಣುತ್ತಿದ್ದ ಚಿನ್ನದ ರೇಖುಗಳನ್ನು ಅಲ್ಲಿನ ಅನ್ವೇಷಕರು ಎತ್ತಿ ಸಂಗ್ರಹಿಸಿ ಬಹುಬೇಗ ಶ್ರೀಮಂತರಾದರು. ಆದರೆ ಕೋಲಾರದ ಸ್ಥಿತಿ ಹೀಗಿರಲಿಲ್ಲ. ಇಲ್ಲಿ ಪ್ರಾಚೀನರು ಬಹು ಹಿಂದೆಯೇ ಚಿನ್ನವನ್ನು ಪತ್ತೆ ಹಚ್ಚಿ ಗಣಿಗಳನ್ನು ಮಾಡಿದ್ದರು. ಹೊಸ ನಿಕ್ಷೇಪವನ್ನು ಪತ್ತೆ ಹಚ್ಚಲು ಆಳವಾದ ಗಣಿಗಳನ್ನು ತೋಡುವುದು ಅನಿವಾರ್ಯವಾಯಿತು.'

ಆಗಿನ ಪರಿಸ್ಥಿತಿಯೂ ಅಷ್ಟೇ ನಿರಾಶಾದಾಯಕವಾಗಿತ್ತು. ಕೋಲಾರದ ಸುತ್ತಮುತ್ತ ಸಾಂಕ್ರಾಮಿಕ ರೋಗ ಉಲ್ಬಣಿಸಿತ್ತು. ಗಣಿಗಳಿಗಂತಿರಲಿ, ಕುಡಿಯುವ ನೀರಿಗೆ ಎಂದೂ ಅಲ್ಲಿ ಬವಣೆ ತಪ್ಪೇ ಇರಲಿಲ್ಲ. 1882ರ ಹೊತ್ತಿಗೆ ಗಣಿ ಕಾರ್ಯಾಚರಣೆ ತೀರಾ ಕೆಳಮಟ್ಟಕ್ಕೆ ಕುಸಿದು ಇನ್ನೇನು ಗಣಿಗಳನ್ನು ಮುಚ್ಚದೆ ಬೇರೆ ಮಾರ್ಗವೇ ಇಲ್ಲ ಎಂಬ ತೀರ್ಮಾನ ತೆಗೆದುಕೊಳ್ಳುವ ಹಂತವನ್ನು ತಲುಪಿತು. 1880ರಿಂದ 1902ರವರೆಗೆ ಕೋಲಾರದ ಚಿನ್ನದ ಗಣಿಗಾರಿಕೆಯ ಮುಖ್ಯಸ್ಥನಾಗಿದ್ದ ಜಾನ್ ಟೇಲರ್, ಹೂಡಿದ್ದ ಬಂಡವಾಳವನ್ನು ಹಂಚುವ ಮೊದಲು ಕೋಲಾರದ ಪುರಾತನ ಚಿನ್ನದ ಗಣಿಗಳನ್ನು ಆಳಕ್ಕೆ ಇಳಿಸಿ ಪರಿಶೋಧಿಸಬೇಕೆಂದು ಸಲಹೆ ನೀಡಿದ. ಕ್ಯಾಪ್ಟನ್ ಪ್ಲಮರ್ ಎಂಬಾತ ಮೈಸೂರು ಗಣಿಯನ್ನು ಆಳಪಡಿಸುತ್ತಿದ್ದಾಗ ಪ್ರಾಚೀನರು ಬಿಟ್ಟಿದ್ದ ಚಿನ್ನದ ಅದುರಿನ ಶಿಲ್ಕು ದೊರೆಯಿತು. ಇದು ಕರ್ನಾಟಕದ ಚಿನ್ನದ ಗಣಿಗಾರಿಕೆಯ ಇತಿಹಾಸವನ್ನೇ ಬದಲಾಯಿಸಿತು. ಈ ಶಿಲ್ಕನ್ನು ಗಣಿ ಮಾಡಿ ತೆಗೆದಾಗ ಪ್ರತಿ ಟನ್ನಿಗೆ 4 ಔನ್ಸ್ ಚಿನ್ನ ದೊರೆಯಿತು. 1885ರ ಹೊತ್ತಿಗೆ ಇದೊಂದೇ ಗಣಿಯಿಂದ 6,000 ಔನ್ಸ್ ಚಿನ್ನವನ್ನು ತೆಗೆಯಲಾಯಿತು. ಆಗಿನ ಅದರ ಮೌಲ್ಯ 24,000 ಪೌಂಡ್‍ಗಳು. 

ಕೋಲಾರದ ಚಿನ್ನದ ಗಣಿ ಪ್ರದೇಶದ ಭೂವಿಜ್ಞಾನ

ಬೆಂಗಳೂರಿನಿಂದ 80 ಕಿ. ಮೀ. ಪೂರ್ವಕ್ಕೆ, ಉತ್ತರ ದಕ್ಷಿಣವಾಗಿ ಸುಮಾರು 80 ಕಿ. ಮೀ. ದೂರ ಹಾಯುವ ಕೋಲಾರದ ಪದರ ಶಿಲಾ ಜಾಡಿಗೆ ಕರ್ನಾಟಕದ ಭೂವಿಜ್ಞಾನದಲ್ಲಿ ವಿಶೇಷ ಸ್ಥಾನವಿದೆ. ಇದರ ಅಗಲ ಸರಾಸರಿ ಆರು ಕಿಲೋಮೀಟರು. ದಕ್ಷಿಣದಲ್ಲಿ ಕಾಮಸಮುದ್ರದಿಂದ ಮುಂದಕ್ಕೆ ಚಾಚಿ ಎರಡು ಕವಲಾಗಿ ಹಂಚಿಹೋಗಿದೆ. ಉತ್ತರದಲ್ಲಿ ಶ್ರೀನಿವಾಸಪುರದವರೆಗೂ ಇದು ವಿಸ್ತರಿಸಿದೆ. ಈ ಶಿಲಾ ಸಮೂಹವನ್ನು ಧಾರವಾಡ ಶಿಲಾ ಸಮೂಹದ ಒಂದು ಭಾಗ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಈ ಬಗೆಯ ಶಿಲೆಗಳನ್ನು ಹಸುರು ಶಿಲಾ ಪಟ್ಟಿ ಎಂಬ ಗುಂಪಿಗೆ ಸೇರಿಸಲಾಗಿದೆ. ಚಿನ್ನವಿರುವ ವಲಯ ಈ ಶಿಲಾ ಪಟ್ಟಿಯಲ್ಲಿದೆ. ಸುಮಾರು ಎಂಟು ಕಿಲೋಮೀಟರುವರೆಗೆ ಇದು ವ್ಯಾಪಿಸಿದೆ. ಇಲ್ಲಿನ ಹಾರ್ನ್‍ಬ್ಲೆಂಡ್ ಪದರ ಶಿಲೆ, ಸ್ವರ್ಣಭರಿತ ಸಿರಗಳಿಗೆ ಮಾತೃವಾಗಿದೆ. ಮೂಲತಃ ಅಗ್ನಿಶಿಲೆಯಾಗಿದ್ದು ಅನಂತರ ರೂಪಾಂತರಣವಾಗಿದೆ. ಪಶ್ಚಿಮ ಅಂಚಿನಲ್ಲಿ ಕಬ್ಬಿಣಯುಕ್ತ  ಕ್ವಾರ್ಟ್‍ಜೈಟ್ ಶಿಲೆಗಳಿವೆ ಪೂರ್ವದ ಅಂಚಿನಲ್ಲಿ ಜರ್ಜರಿತವಾದ ಶಿಲೆಗಳಿವೆ. ಹಿಂದೆ ಈ ಶಿಲೆಗಳನ್ನು ಜಲಜ ಶಿಲೆಯ ಒಂದು ರೂಪವೆಂದು ಪರಿಗಣಿಸಲಾಗಿತ್ತು. ಇತ್ತೀಚಿನ ಸಂಶೋಧನೆಯಿಂದ ಇವು ಜ್ವಾಲಾಮುಖಿಯಿಂದ ಉಂಟಾದ ಅಗ್ನಿಶಿಲೆಗಳೆಂದೂ ಪರಿಗಣಿಸಲಾಗಿದೆ. ಈ ಅಭಿಪ್ರಾಯವನ್ನು ಪೋಷಿಸುವಂತೆ ಈ ಭಾಗದಲ್ಲಿ ಅಗ್ನಿಪರ್ವತ ಸಿಡಿಸಿದ ಸಿಡಿಬಾಂಬುಗಳು, ಏಣುಗಳಿರುವ ಶಿಲಾ ಚೂರುಗಳು ಪತ್ತೆಯಾಗಿದೆ. ಬೇತಮಂಗಲ ರಸ್ತೆಯಲ್ಲಿರುವ ಪೆದ್ದಪಲ್ಲಿ ಎಂಬಲ್ಲಿ ಈ ಬಗೆಯ ಶಿಲೆಗಳನ್ನು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ರಕ್ಷಿಸಲಾಗಿದೆ. ಕೋಲಾರದ ಪದರು ಶಿಲಾ ಜಾಡಿನಲ್ಲಿ ಅಲ್ಲಲ್ಲೇ ಗ್ರಾನೈಟ್ ಶಿಲೆ ಅಂತಸ್ಸರಣಗೊಂಡಿದೆ. ಈ ಚಟುವಟಿಕೆ ನಡೆದು 2600 ಮಿಲಿಯನ್ ವರ್ಷಗಳಾಗಿವೆ ಎಂದು ಅಂದಾಜು. ಸ್ವರ್ಣಭರಿತ ಬೆಣಚು ಸಿರಗಳು ಹಾರ್ನ್‍ಬ್ಲೆಂಡ್ ಶಿಲೆಗಳಲ್ಲಿರುವ ಸ್ತರಭಂಗದಿಂದಾದ ಬಿರುಕುಗಳನ್ನು ತುಂಬಿ ರೂಪುಗೊಂಡಿವೆ ಎಂದು ಭೂವೈಜ್ಞಾನಿಕ ಅಧ್ಯಯನದಿಂದ ತಿಳಿದು ಬಂದಿದೆ. ಬಹುಶಃ ಗ್ರಾನೈಟ್ ಶಿಲೆ, ನಾಡಶಿಲೆಯಲ್ಲಿ ಅಂತಸ್ಸರಣಗೊಂಡ ಕಾಲಕ್ಕೆ ಶಿಲಾ ಪಾಕದೊಂದಿಗೆ ಬಂದ ಬೆಣಚು ಚಿನ್ನವನ್ನು ಹೊತ್ತು ತಂದು ಈ ಬಿರುಕುಗಳಲ್ಲಿ ತುಂಬಿರಬಹುದು .

ಇಡೀ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಪ್ರಮುಖವಾಗಿ 26 ಸ್ವರ್ಣಭರಿತ ಸಿರಗಳಿವೆ. ಇವುಗಳಲ್ಲಿ ಪ್ರಧಾನವಾಗಿ ಎರಡು ಬಗೆ. ಸಲ್ಫೈಡ್ ಖನಿಜಗಳು ಬೆರೆತಿರುವ ಪಶ್ಚಿಮ ಸಿರಗಳು ಮತ್ತು ನೇರವಾಗಿ ಯಂತ್ರಕ್ಕೆ ಕೊಟ್ಟು ಚಿನ್ನವನ್ನು ಸಂಗ್ರಹಿಸಬಹುದಾದ ಪೂರ್ವ ಸಿರಗಳು. ಇವುಗಳಲ್ಲೆಲ್ಲ ಛಾಂಪಿಯನ್ ಸಿರದ ಮೇಲೆ ಅತ್ಯಂತ ಆಳವಾದ ಗಣಿಯಿದೆ. ಕೋಲಾರದ ಚಿನ್ನದ ಗಣಿಗಳ ಪೈಕಿ ಇದು ಅತ್ಯಂತ ಹೆಚ್ಚಿನ ಚಿನ್ನವನ್ನು ಉತ್ಪಾದಿಸಿದೆ. ದಕ್ಷಿಣದಲ್ಲಿ  ಮೈಸೂರು ಗಣಿ, ಮಧ್ಯದಲ್ಲಿ ಛಾಂಪಿಯನ್ ಗಣಿ, ವಾಯುವ್ಯದಲ್ಲಿ ನಂದಿದುರ್ಗ ಗಣಿಗಳಿವೆ. 1880ರಿಂದ ಪ್ರಾರಂಬಿsಸಿ 1990ರವರೆಗೆ ಈ ಎಲ್ಲ ಗಣಿಗಳಿಂದ ಒಟ್ಟು 800 ಟನ್ನು ಚಿನ್ನ ಉತ್ಪಾದನೆಯಾಗಿದೆ.. 3320 ಮೀಟರು ಆಳದವರೆಗೆ ವಿಸ್ತರಿಸಿರುವ ಈ ಗಣಿಗಳ ಎಲ್ಲ ಕೂಪಗಳನ್ನು ಸಾಲಿಗೆ ಪೋಣಿಸಿದರೆ 63 ಕಿಲೋ ಮೀಟರು ಉದ್ದದ  ಕೂಪಗಳಾಗುತ್ತವೆ.  ಹಾಗೆಯೇ ಎಲ್ಲ ಸುರಂಗಗಳನ್ನು ಒಂದರ ಹಿಂದೆ ಒಂದು ಪೋಣಿಸಿದರೆ ಅವು 650 ಕಿಲೋ ಮೀಟರು ಉದ್ದದ ಸುರಂಗವಾಗುತ್ತದೆ.  

ಛಾಂಪಿಯನ್ ಸಿರ ಸಮೂಹ

ಕೋಲಾರದ ಚಿನ್ನದ ಗಣಿಗಳ ಅತ್ಯಂತ ಸ್ವರ್ಣಭರಿತವಾದ ಛಾಂಪಿಯನ್ ಸಿರ ಸಮೂಹ ಅತಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಮತ್ತು ನಿಕ್ಕಲ್ ಧಾತುಗಳಿರುವ ಬಸಾಲ್ಟ್ ಲಾವಾ ಶಿಲೆಗಳಲ್ಲಿದೆ. ಈ ಸಂಯೋಜನೆಯ ಪ್ರಾಚೀನ ಅಗ್ನಿಶಿಲೆಗಳನ್ನು ಕೊಮಾಟಿಯೈಟ್ ಎಂದು ಕರೆದಿದ್ದಾರೆ. ಉತ್ತರಕ್ಕೆ ಬಲ್ಗಾಟ್ ಗಣಿವರೆಗೆ, ದಕ್ಷಿಣಕ್ಕೆ ಮೈಸೂರು ಗಣಿವರೆಗೆ ಹಬ್ಬಿರುವ ಈ ಸಿರದಲ್ಲಿ ತಿಳಿ ಬೂದುಬಣ್ಣದ ಸಣ್ಣ ಸಣ್ಣ ಬೆಣಚಿನ ಎಳೆಗಳು ಸ್ವರ್ಣಭರಿತವಾಗಿವೆ.  ಪುರಾತನ ಚಿನ್ನದ ಗಣಿಗಳು ಈ ಎಳೆಗಳನ್ನು ಆಧರಿಸಿ ಸಾಕಷ್ಟು ಆಳಕ್ಕೆ ಇಳಿದಿವೆ. ಭೂಮಟ್ಟದಿಂದ ಛಾಂಪಿಯನ್ ಸಿರ ಸುಮಾರು 45 ಡಿಗ್ರಿಯಷ್ಟು ಓರೆಗೊಂಡಿದೆ. ಆಳಕ್ಕೆ ಇಳಿದಂತೆ ನೆಟ್ಟಗೆ ಗೋಡೆಯಂತೆ ಹಬ್ಬುತ್ತದೆ. ಈ ಸಿರವನ್ನು ಅನುಸರಿಸಿ 102ನೇ ಹಂತದವರೆಗೆ ಚಿನ್ನವನ್ನು ತೆಗೆದಿದ್ದಾರೆ. ಈ ಹಂತ 3230ಮೀಟರು ಆಳದಲ್ಲಿದೆ. ಅಲ್ಲಿನ ಉಷ್ಣತೆ 69 ಡಿಗ್ರಿ ಸೆಂ. ಕರ್ನಾಟಕದ ಯಾವುದೇ ಭಾಗದಲ್ಲೂ ಕಡುಬೇಸಗೆಯಲ್ಲೂ ಉಷ್ಣತೆ ಈ ಮಟ್ಟ ತಲಪುವುದಿಲ್ಲ. ಈ ಸಿರದಲ್ಲಿ ಸ್ವರ್ಣಭರಿತ ಬೆಣಚಿನ ಜೊತೆಗೆ ಕ್ಯಾಲ್ಸೆ ೈಟ್, ಫೆಲ್ಡ್‍ಸ್ಪಾರ್, ಎಪಿಡೋಟ್, ಟೂರ್ಮಲೀನ್, ಮಸ್ಕೋವೈಟ್, ಅಪಟೈಟ್, ಗ್ರಾಫೈಟ್ ಹಾಗೂ ಕಡಿಮೆ ಪ್ರಮಾಣದ ಸಲ್ಫೈಡ್ ಖನಿಜಗಳು ಸಹಜನನವಾಗಿವೆ.  ಸಣ್ಣ ಸಣ್ಣ ಸ್ವರ್ಣಭರಿತ ಎಳೆಗಳ ಒಟ್ಟೂ ಅಗಲ ಸುಮಾರು 200ಮೀಟರು, 8 ಕಿಲೋ ಮೀಟರು ಉದ್ದಕ್ಕೂ ಕೋಲಾರದ ಪದರ ಶಿಲಾಜಾಡಿನಲ್ಲಿ ಇವು ವ್ಯಾಪಿಸಿವೆ.

ಪಶ್ಚಿಮ ಸ್ವರ್ಣ ಸಿರಗಳು 

ಓರಿಯೆಂಟಲ್ ಸಿರ ಸೇರಿದಂತೆ ಪಶ್ಚಿಮದ ಸ್ವರ್ಣ ಸಿರಗಳು ಬಹುತೇಕ ಪಟ್ಟೆರೂಪದ ಚರ್ಟ್ ಮತ್ತು ಜ್ವಾಲಾಮುಖಿ ಜನ್ಯ ಟುಫ್ ಸ್ತರಗಳಿಗೆ ಸೀಮಿತವಾಗಿದೆ. ಚಿನ್ನದೊಂದಿಗೆ ಸಲ್ಫೈಡ್ ಖನಿಜಗಳು ಬೆರೆತಿರುವುದು ಈ ಸಿರಗಳ ವೈಶಿಷ್ಟ ್ಯ. ಸಲ್ಫೈಡ್ ಖನಿಜಗಳಲ್ಲಿ ಪಿರ್ಹೋಟೈಟ್ ಪ್ರಧಾನವಾಗಿಯೂ, ಚಾಲ್ಕೋಪೈರೈಟ್ ಮತ್ತು ಆರ್ಸೆನೋಪೈರೈಟ್ ಅಪ್ರಧಾನವಾಗಿಯೂ ಕಂಡು ಬಂದಿವೆ.  ಛಾಂಪಿಯನ್ ಸಿರ ಸಮೂಹಕ್ಕೆ 400 ರಿಂದ 500 ಮೀಟರು ಪಶ್ಚಿಯದಲ್ಲಿರುವ ಈ ಸಿರಗಳ ಒಟ್ಟೂ  ಉದ್ದ 4700 ಮೀಟರು. ಸುಮಾರು 300 ಮೀಟರು ಅಗಲ ಸಿರಗಳೂ ವ್ಯಾಪಿಸಿವೆ. ಕೋಲಾರ ಗಣಿಗಳ ಚಿನ್ನದ ಉತ್ಪಾದನೆಯಲ್ಲಿ ಇವುಗಳ ಪಾಲು ಶೇ. 2.5 ಭಾಗ ಮಾತ್ರ. ಬಿಡಿ ಸ್ವರ್ಣಸಿರ ಕೇವಲ 2 ಮೀಟರು ಅಗಲವಾಗಿದೆ. ಈ ಗಣಿಯ ಮೇಲಿನ ಭಾಗವನ್ನು ಹೆಚ್ಚು ಗಣಿ ಮಾಡದೆ ಇರುವುದರಿಂದ ಇದರಲ್ಲೂ ಚಿನ್ನದ ಅದುರು ಗಣನೀಯ ಪ್ರಮಾಣದಲ್ಲಿದೆ.

1956ರಲ್ಲಿ ಕರ್ನಾಟಕ ಸರ್ಕಾರ ಕೋಲಾರದ ಚಿನ್ನದ ಗಣಿಗಳನ್ನು ರಾಷ್ಟ್ರೀಕರಣ ಮಾಡಿತು. 1962ರಲ್ಲಿ ಭಾರತ ಸರ್ಕಾರ ಇದನ್ನು ವಹಿಸಿಕೊಂಡಿತು. 1965ರಲ್ಲಿ ಮೈಸೂರು ಗಣಿ ಛಾಂಪಿಯನ್ ಗಣಿಯೊಂದಿಗೆ ವಿಲೀನವಾಯಿತು. 1972ರಲ್ಲಿ ಕೋಲಾರದ ನಾಲ್ಕೂ ಗಣಿ ಕಂಪನಿಗಳನ್ನು ವಿಲೀನ ಮಾಡಿ "ಕೋಲಾರ್ ಗೋಲ್ಡ್ ಮೈನಿಂಗ್ ಅಂಡರ್‍ಟೇಕಿಂಗ್" ಸಂಸ್ಥೆಯನ್ನು "ಭಾರತ್ ಗೋಲ್ಡ್ ಮೈನಿಂಗ್ ಸಂಸ್ಥೆ" ಯೆಂದು ಮರುನಾಮಕರಣ ಮಾಡಲಾಯಿತು.
ಕ್ರಿ.ಶ. 1880ರಲ್ಲಿ ಕೋಲಾರದ ಚಿನ್ನದ ಗಣಿಗಳಿಂದ ಉತ್ಪಾದನೆಯಾದ ಚಿನ್ನದ ಶೇ.5ರಷ್ಟು ಬೆಲೆಯ ಭಾಗವನ್ನು  ಮೈಸೂರು ಸರ್ಕಾರಕ್ಕೆ ರಾಜಧನವಾಗಿ ನೀಡಲಾಯಿತು. ಆನಂತರ 1910ರಿಂದ ಈ ಗಣಿಗಳಿಂದ ಉತ್ಪಾದನೆಯಾದ ಚಿನ್ನವನ್ನು ಮಾರಾಟ ಮಾಡಿ ಗಳಿಸಿದ ಲಾಭಾಂಶದ ಮೇಲೆ ಶೇ. 2 ಭಾಗ ಕರ ವಿಧಿಸಲಾಯಿತು. ಎರಡನೇ ಮಹಾಯುದ್ಧದ ಪರಿಣಾಮವಾಗಿ ಚಿನ್ನದ ಬೆಲೆ ಏರಿತು. ಆಗ ಮೈಸೂರು ಸರ್ಕಾರ ಕರವನ್ನು ಏರಿಸಿತು. ಒಂದು ಔನ್ಸ್ ಚಿನ್ನದ ಬೆಲೆ ನೂರು ರೂಪಾಯಿ ದಾಟಿದರೆ ಹೆಚ್ಚುವರಿ ಬೆಲೆಯ ಶೇ. 75 ಭಾಗ ರಾಜ್ಯದ ಬೊಕ್ಕಸ ಸೇರುವಂತೆ ನಿಮಯವನ್ನು ರೂಪಿಸಲಾಯಿತು. 1949ರಲ್ಲಿ ಚಿನ್ನದ ಬೆಲೆ ಒಂದು ಔನ್ಸ್‍ಗೆ 306 ರೂಪಾಯಿ ದಾಟಿತು. ರಾಜಾದಾಯವನ್ನು ನೀಡಿಯೂ  ಈ ಗಣಿಗಳು ಲಾಭದಾಯಕವಾಗಿ ನಡೆಯುತ್ತಿದ್ದವು. 1940ರಿಂದ 1955ರವರೆಗೆ ಮೈಸೂರು ಸರ್ಕಾರಕ್ಕೆ ಈ ಗಣಿಗಳಿಂದ ಹನ್ನೆರಡೂವರೆ ಕೋಟಿ ರೂಪಾಯಿ ರಾಜಾದಾಯ ಸಂದಾಯವಾಯಿತು. 1988ರವರೆಗೆ ಕೋಲಾರದ ಚಿನ್ನದ ಗಣಿಗಳಿಂದ ಉತ್ಪನ್ನವಾದ ಎಲ್ಲ ಚಿನ್ನವನ್ನು ಅಚಿತಾರಾಷ್ಟ್ರೀಯ ನಿಧಿ ಸಂಸ್ಥೆ ನಿಗದಿ ಪಡಿಸಿದ ದರಕ್ಕೆ ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಇದರ ನಂತರ ಲಂಡನ್ನಿನ ಚಿನಿವಾರ ಪೇಟೆಯ ಚಿನ್ನದ ದರ ಅನುಸರಿಸಿ ಇಲ್ಲಿನ ಚಿನ್ನವನ್ನು ಮಾರಲು ಸರ್ಕಾರ ಸಮ್ಮತಿಸಿ ಅದಕ್ಕೆ ಶೇ.35 ಭಾಗ ಸೇರಿಸಿ ಕೊಂಡುಕೊಳ್ಳುತ್ತಿತ್ತು. ಇದರಿಂದಾಗಿ ಚಿನ್ನದ ಗಣಿ ಉದ್ಯಮದ ನಷ್ಟದ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಇದರ ಹಿಂದೆಯೇ ಚಿನ್ನದ  ವ್ಯಾಪಾರಿಗಳಿಗೆ ಒಂದು ಕಿಲೋಗ್ರಾಂ ಮಿತಿಯವರೆಗೆ ನೇರ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಯಿತು. 1989ರಲ್ಲಿ ಈ ಸವಲತ್ತನ್ನು ಕೆಲವು ಆಯ್ದ ಕೈಗಾರಿಕೆಗಳಿಗೆ ವಿಸ್ತರಿಸಲಾಯಿತು. ಆದರೂ ಚಿನ್ನದ ಗಣಿ ಉದ್ಯಮ ಕುಂಟುತ್ತ ಸಾಗಿದೆ. 10 ಗ್ರಾಂ ಚಿನ್ನದ ಮಾರುಕಟ್ಟೆ ಬೆಲೆ ಸುಮಾರು 6000 ರೂ. ಆದರೆ ಗಣಿಯಲ್ಲಿ ಇದೇ ಪ್ರಮಾಣದ ಚಿನ್ನವನ್ನು ತೆಗೆಯಲು 11,000 ರೂಪಾಯಿ ವೆಚ್ಚ ಬರುತ್ತಿತ್ತು. ಈಗ ಕೋಲಾರದ ಚಿನ್ನದ ಗಣಿಗಳು ಬಹುತೇಕ ಸ್ಥಗಿತವಾಗಿದೆ. ವಾರ್ಷಿಕ ಕೇವಲ 300 ಕಿಲೋ ಗ್ರಾಂವರೆಗೆ ಚಿನ್ನದ ಉತ್ಪತ್ತಿಯಾಗುತ್ತಿದೆ. ಆಳ ಗಣಿ ಮಾಡಿದಷ್ಟೂ ವೆಚ್ಚ ಏರುತ್ತಿದೆ. ಅಲ್ಲದೆ, ಮೊದಲಿನಂತೆ ಗಣಿಯಲ್ಲಿ ಉತ್ಕೃಷ್ಟ ಅದುರು ಲಭ್ಯವಿಲ್ಲ. 1905ರಲ್ಲಿ ಕೋಲಾರದ ಚಿನ್ನದ ಗಣಿಯಿಂದ ಒಂದೇ ವರ್ಷದಲ್ಲಿ 19 ಟನ್ನು ಚಿನ್ನ ಉತ್ಪಾದನೆಯಾಗಿ ಅದೊಂದು ದಾಖಲೆಯಾಯಿತು. 1984-85ರಿಂದೀಚೆಗೆ ನಿರಂತರವಾಗಿ ಉತ್ಪಾದನೆ ಕುಗ್ಗುತ್ತಿದೆ. ಒಂದು ಹಂತದಲ್ಲಿ ಸರ್ಕಾರ ಈ ಗಣಿಗಳನ್ನು ಮುಚ್ಚುವ ಯೋಚನೆಯನ್ನೂ ಮಾಡಿತ್ತು. ಹಾಗೆಂದೊಡನೆ ತಜ್ಞರು ನಿರಾಶರಾಗಿಲ್ಲ. ಹಿಂದೆಲ್ಲ ಉತ್ಕøಷ್ಟ ದರ್ಜೆಯ ಅದುರನ್ನು ಮಾತ್ರ ಗಣಿ ಮಾಡಿ ತ್ವರಿತ ಲಾಭ ಗಳಿಸುವುದೇ ಗುರಿಯಾಗಿತ್ತು. ಆಗ ಒಂದು ಟನ್ನು ಅದುರಿನಲ್ಲಿ 15 ಗ್ರಾಂಗಿಂತ ಕಡಿಮೆ ಚಿನ್ನವಿದ್ದರೆ ಅಂಥ ಅದುರನ್ನು ನಿಕೃಷ್ಟ ಎಂದು ಪರಿಗಣಿಸಿ ಅಲಕ್ಷಿಸುತ್ತಿದ್ದರು. ಈಗ ತಂತ್ರಜ್ಞಾನದಲ್ಲಿ ಭಾರಿ ಸುಧಾರಣೆಯಾಗಿದೆ. ತೆರೆದ ಗಣಿ ಕಾರ್ಯಾಚರಣೆ ಮಾಡಿ 1 ರಿಂದ 2.5 ಗ್ರಾಂ ಚಿನ್ನವಿದ್ದರೂ ಸಾಕು ಲಾಭದಾಯಕವಾಗಿ ಗಣಿ ಮಾಡಬಹುದೆಂದು ಪ್ರಾಯೋಗಿಕವಾಗಿ ಕಂಡುಕೊಳ್ಳಲಾಗಿದೆ.  ಅದರಲ್ಲೂ ಓರಿಯೆಂಟಲ್ ಸ್ವರ್ಣ ಸಿರದ ಬಹುಭಾಗವನ್ನು ಗಣಿ ಮಾಡದೆಯೇ ಮೇಲು ಭಾಗದಲ್ಲಿ ಹಾಗೆಯೇ ಉಳಿಸಿದ್ದಾರೆ. ಇಂಥ ಸಿರಗಳು ತೆರೆದ ಗಣಿ ಮಾಡಲು ಯುಕ್ತ ಎಂದು ತಜ್ಞರು ಭಾವಿಸಿದ್ದಾರೆ. ಇದಲ್ಲದೆ ಕೆ.ಜಿ.ಎಫ್ ಪಟ್ಟಣದ ಸುತ್ತ ಗುಡ್ಡದಂತೆ ರಾಶಿ  ಹಾಕಿರುವ ಸಂಸ್ಕರಿಸಿದ ಅದುರಿನ ವ್ಯರ್ಥ ರಾಶಿ ಮೂವತ್ತು ಕೋಟಿ ಟನ್ನುಗಳಷ್ಟಿದೆಯೆಂದು ಅಂದಾಜು. ಈ ರಾಶಿಯಲ್ಲಿ ಕನಿಷ್ಠ ಶೇ. 0.5 ಭಾಗ ಅತಿ ಸೂಕ್ಷ ್ಮ ಚಿನ್ನದ ಕಣಗಳಿವೆ. ಇದನ್ನು ಮರು ಸಂಸ್ಕರಣೆಗೆ ಒಳಪಡಿಸಿದರೆ ಅತ್ಯಂತ ಕನಿಷ್ಠವೆಂದರೂ 25 ಟನ್ನು ಚಿನ್ನ ಉತ್ಪಾದಿಸಲು ಸಾಧ್ಯ. ಈ ರಾಶಿಯಲ್ಲಿರುವ ಶೇ. 60 ಭಾಗ ಚಿನ್ನವನ್ನು ಮರುಪಡೆಯಬಹುದೆಂದು ಗಣನೆ ಮಾಡಲಾಗಿದೆ. ಇದಲ್ಲದೆ ಭಾರತ್ ಗೋಲ್ಡ್ ಮೈನ್ಸ್ ಸಂಸ್ಥೆ ಇತ್ತೀಚೆಗೆ ವರದಿ ಮಾಡಿರುವಂತೆ ಟನ್ನಿಗೆ 5 ಗ್ರಾಂ ಚಿನ್ನವಿರುವ 40 ಲಕ್ಷ ಟನ್ನು ಅದುರಿನ ಮೀಸಲು ನಿಕ್ಷೇಪ ಇನ್ನೂ ಗಣಿಯಲ್ಲಿದೆ. ಈ ಅಂಶಗಳನ್ನೆಲ್ಲ ಪರಿಗಣಿಸಿ ಕಾರ್ಯೋನ್ಮುಖವಾದರೆ ಕೋಲಾರದ ಚಿನ್ನದ ಗಣಿಗಳಿಗೆ ಇನ್ನಷ್ಟು ಕಾಲ ಜೀವದಾನ ಬರುತ್ತದೆ.

ಹಟ್ಟಿ ಚಿನ್ನದ ಗಣಿಗಳು

ಕೋಲಾರದ ಚಿನ್ನದ ಗಣಿಗಳನ್ನುಳಿದರೆ ಅತ್ಯಂತ ಹೆಚ್ಚಿನ ಚಿನ್ನದ ಗಣಿಗಾರಿಕೆ ನಡೆಯುತ್ತಿರುವುದು ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳಲ್ಲಿ. ಕೋಲಾರದ ಚಿನ್ನದ ಗಣಿ ಪ್ರಾರಂಭವಾದ ಕಾಲಕ್ಕೆ ಹಟ್ಟಿ ಚಿನ್ನದ ಗಣಿಗಳಲ್ಲೂ ಚಿನ್ನ ತೆಗೆಯುವ ಕೆಲಸ ಪ್ರಾರಂಭವಾಯಿತು. 1887ರಿಂದ 1920ರವರೆಗೆ ಇಲ್ಲಿ 7.5 ಟನ್ನು ಚಿನ್ನವನ್ನು ಗಣಿ ಮಾಡಲಾಗಿದೆ. ಇದಕ್ಕಾಗಿ 3,85,000 ಟನ್ನು ಅದುರನ್ನು ಅರೆಯಲಾಗಿದೆ. ಆಗಿನ ಅದುರಿನ ಚಿನ್ನದ ಅಂಶ ಟನ್ನಿಗೆ 19 ಗ್ರಾಂ ಇತ್ತು. ಮೆಯ್ನ್ ರೀಫ್ ಎಂಬ ಸ್ವರ್ಣ ಸಿರಕ್ಕೆ ಮಾತ್ರ ಗಣಿಗಾರಿಕೆ ಸೀಮಿತವಾಗಿತ್ತು. 

ವಾಸ್ತವವಾಗಿ ಕೋಲಾರ, ಹಟ್ಟಿ ಚಿನ್ನದ ಗಣಿಗಳ ಚಿನ್ನವೇ ರಾಷ್ಟ್ರದ ಬೊಕ್ಕಸಕ್ಕೆ ನೇರವಾದ ಕೊಡುಗೆ. ಇವುಗಳ ಜೊತೆಗೆ ಈಗ ಆಂಧ್ರಪ್ರದೇಶದ ರಾಮಗಿರಿ ಗಣಿಗಳು ಸುಮಾರು ವರ್ಷಕ್ಕೆ 100 ಕಿಲೋ ಗ್ರಾಂ ಚಿನ್ನವನ್ನು ಉತ್ಪಾದಿಸುತ್ತವೆ. ಅಲ್ಲದೆ ತಾಮ್ರ ಸಂಸ್ಕರಿಸುವಾಗ ಅದರೊಡನೆ ಬೆರೆತಿರುವ ಚಿನ್ನವನ್ನು ಹಿಂದುಸ್ಥಾನ್ ತಾಮ್ರ ನಿಯಮಿತ ಕಂಪನಿ ಉಪ ಉತ್ಪನ್ನವಾಗಿ ಸುಮಾರು 100 ಕಿಲೋ ಗ್ರಾಂ ಚಿನ್ನವನ್ನು ಉತ್ಪಾದಿಸುತ್ತಿದೆ. ಸ್ವರ್ಣ ಭಸ್ಮ ಮಾಡಲೆಂದೇ ಆಯುರ್ವೇದದ ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದಲ್ಲಿ ಸುಮಾರು 200 ಕಿಲೋ ಗ್ರಾಂ ಚಿನ್ನದ ಬಳಕೆಯಿದೆ. ಇದರ ಅರ್ಥ ನೇರವಾಗಿ ರಾಷ್ಟ್ರ  ಅವಲಂಬಿಸಿರುವುದು ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳ ಮೇಲೆ.

ಹಟ್ಟಿ ಚಿನ್ನದ ಗಣಿಗಳಿರುವುದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನಲ್ಲಿ. ಹಟ್ಟಿ, ಹಳ್ಳಿಯ ಹೆಸರು. ಅದರ ಪಕ್ಕದಲ್ಲೇ ಪುರಾತನರು ನೂರಾರು ಸಣ್ಣ ಪುಟ್ಟ ಚಿನ್ನದ ಗಣಿಗಳನ್ನು ತೋಡಿದ್ದರು. ಈಗಾಗಲೇ ಉಲ್ಲೇಖಿಸಿರುವಂತೆ 195 ಮೀಟರು ( 640 ಅಡಿ) ಆಳದ ಹಟ್ಟಿಯ ಪುರಾತನ ಚಿನ್ನದ ಗಣಿಗಳು ಅದ್ವಿತೀಯ ಎಂಬ ಹೆಸರಿಗೆ ಪಾತ್ರವಾಗಿವೆ. ರಾಯಚೂರಿಗೆ ಎಂಬತ್ತು ಕಿಲೋ ಮೀಟರು ಪಶ್ಚಿಮಕ್ಕಿರುವ ಹಟ್ಟಿಯ ಚಿನ್ನದ ಜಾಡು ಭೌಗೋಳಿಕ ಮತ್ತು ರಾಜಕೀಯ ಪ್ರಾಮುಖ್ಯ ಗಳಿಸಿದ ಭಾಗ. ಕೃಷ್ಣಾ ನದಿಯಿಂದ ಈ ಗಣಿಗಳಿರುವುದು 16 ಕಿ. ಮೀ. ದೂರದಲ್ಲಿ. ಹೈದರಾಬಾದಿನ ನಿಜಾಮನ ಆಡಳಿತಕ್ಕೆ ಒಳಗಾಗಿ ಇದು ರಾಯಚೂರು ದೊಅಬ್ ಎಂದೇ ಕರೆಸಿಕೊಂಡ ಜಿಲ್ಲೆ. ಹಟ್ಟಿ-ಮಸ್ಕಿ ಶಿಲಾ ಜಾಡೆಂದೇ   ಹೆಸರಾಗಿರುವ ಈ ಜಾಗ ಸುಮಾರು 750 ಚ.ಕಿಲೋಮೀಟರು ಪ್ರದೇಶವನ್ನು ಆಕ್ರಮಿಸಿಕೊಂಡಿದೆ.

ಕ್ರಿ.ಶ. 1880ರ ಸುಮಾರಿನಲ್ಲಿ ಕೋಲಾರದ ಚಿನ್ನದ ಗಣಿಗಳು ಪ್ರಖ್ಯಾತಿ ಪಡೆದ ಕಾಲದಲ್ಲೇ ರಾಯಚೂರಿನ ಈ ಹಟ್ಟಿ ಗಣಿಗಳು ಗಮನ ಸೆಳೆದವು. ಕ್ರಿ.ಶ. 1874ರಲ್ಲಿ ಬ್ರೂಸ್‍ಫುಟ್, ಈ ಭಾಗಗಳಲ್ಲಿ ಚಿನ್ನದ ಸಿರಗಳ ವಿವರಣೆ ನೀಡಿದ. ಕ್ರಿ.ಶ. 1877ರ ಹೊತ್ತಿಗೆ ಹೈದರಾಬಾದಿನ ಡೆಕ್ಕನ್ ಕಂಪನಿ 2590 ಚ. ಕಿ.ಮೀ. ಜಾಗವನ್ನು ಗುತ್ತಿಗೆಗೆ ಪಡೆದು `ರಾಯಚೂರು ದೊಅಬ್ ಗೋಲ್ಡ್ ಫೀಲ್ಡ್ ಹೆಸರಿನಲ್ಲಿ ಸುರಪುರ ತಾಲ್ಲೂಕನ್ನು ಒಳಗೊಂಡಂತೆ ಸಮೀಕ್ಷೆ ನಡೆಸಿ ಚಿನ್ನ ಶೋಧಿಸಲು ಪ್ರಾರಂಭಿಸಿತು. ಭಾರತೀಯ ಭೂವಿಜ್ಞಾನ ಸಂಸ್ಥೆಯ ಪರಿಣತ ಭೂವಿಜ್ಞಾನಿಗಳು ಈ ಕಾರ್ಯವನ್ನು ಕೈಗೆತ್ತಿಕೊಂಡರು. ಹಟ್ಟಿ ಹಳ್ಳಿಗೆ ಅರ್ಧ ಕಿಲೋ ಮೀಟರು ಪಶ್ಚಿಮದಲ್ಲಿ ಉಳುಮೆ ಭೂಮಿಯಲ್ಲಿ ತೇಲುತ್ತಿದ್ದ ಬೆಣಚು ಕಲ್ಲಿನಲ್ಲಿ ಮೊದಲು ಚಿನ್ನವನ್ನು ಪತ್ತೆ ಹಚ್ಚಲಾಯಿತು. ಇದು ಅಲ್ಲಿನ ಪುರಾತನ ಚಿನ್ನದ ಗಣಿಗಳನ್ನು ಪತ್ತೆ ಹಚ್ಚಲು ನೆರವಾಯಿತು. ಹಟ್ಟಿಗೆ 20 ಕಿ. ಮೀ. ಪರಿಧಿಯಲ್ಲೇ ಕ್ರಿ.ಶ. 1887-1900ರ ನಡುವೆ ಅನೇಕ ಕಂಪನಿಗಳು ಚಿನ್ನದ ಪರಿಶೋಧನೆಗೆ ತೊಡಗಿದವು. ವಂಡಳ್ಳಿಯಲ್ಲಿ ಇದೇ ಕಂಪನಿಗೆ ಸೇರಿದ ಶಾಖೆ 1898ರಲ್ಲಿ ಗಣಿಯನ್ನು ಪ್ರಾರಂಭಿಸಿತು.  373 ಕಿಲೋ ಗ್ರಾಂ ಚಿನ್ನವನ್ನು ಉತ್ಪಾದಿಸಿ ಹೇಳಿಕೊಳ್ಳುವ ಲಾಭ ಪಡೆಯದೆ ಕಂಪನಿ ಮುಚ್ಚಿತು. ಕ್ರಿ.ಶ. 1901ರಲ್ಲಿ ನಿಜಾಮ್ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ ಹಟ್ಟಿಯ ಮುಖ್ಯ ಗಣಿಯ ಕಾರ್ಯಾಚರಣೆ ಪ್ರಾರಂಭಿಸಿತು. ಕ್ರಿ.ಶ. 1903-1920ರ ನಡುವೆ ಅದು 7371 ಕಿಲೋ ಗ್ರಾಂ. ಚಿನ್ನವನ್ನು ಉತ್ಪಾದಿಸಿತು. ಇದರಂತೆ ಕೆಂಪನದೊಡ್ಡಿಯ ಬಳಿ ಇದೇ ಕಂಪನಿ 1905ರಲ್ಲಿ 66 ಕಿಲೋ ಗ್ರಾಂ ಚಿನ್ನ ಉತ್ಪಾದಿಸಿ 1908ರಲ್ಲಿ ಮುಚ್ಚಿಹೋಯಿತು.

ಕ್ರಿ.ಶ. 1937ರಲ್ಲಿ ಹೈದರಾಬಾದ್ ಸರ್ಕಾರ ಹೈದರಾಬಾದ್ ಗೋಲ್ಡ್ ಡೆವಲಪ್‍ಮೆಂಟ್ ಸಿಂಡಿಕೇಟ್ ಮತ್ತು ಜಾನ್ ಟೇಲರ್ ಕಂಪನಿ, ಹಟ್ಟಿಯ ಪುರಾತನ ಚಿನ್ನದ ಗಣಿಗಳ ಕೂಲಂಕಷ ಅಧ್ಯಯನದಲ್ಲಿ ತೊಡಗಿದವು. ಏಕೆಂದರೆ ಆಗ ಚಿನ್ನದ ಬೆಲೆ ಒಂದು ತೊಲಕ್ಕೆ 37.37 ರೂಪಾಯಿ ಏರಿತು. ಜೊತೆಗೆ ರಾಯಚೂರು ಜಿಲ್ಲೆ ಬರ ಪೀಡಿತ ಪ್ರದೇಶವಾಗಿದ್ದುದರಿಂದ ಪರಿಹಾರೋಪಾಯವಾಗಿ ಗಣಿ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿತು. ಹಟ್ಟಿ ಚಿನ್ನದ ಗಣಿಗಳ ಅಭಿವೃದ್ಧಿಗೆ ಈ ಯೋಜನೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಹಟ್ಟಿ ಚಿನ್ನದ ಗಣಿಯ ಕಾರ್ಯಾಚರಣೆ ಸ್ಥಗಿತವಾಯಿತು. ಕ್ರಿ.ಶ. 1947ರವರೆಗೂ ಗಣಿ ಕಾರ್ಯಾಚರಣೆ ಮುಂದುವರಿಯಲಿಲ್ಲ. ಕ್ರಿ.ಶ. 1948ರಲ್ಲಿ ಹೈದರಾಬಾದ್ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಮತ್ತೆ ಚಿನ್ನವನ್ನು ಉತ್ಪಾದಿಸಲು ತೊಡಗಿತು. 1948ರಿಂದ 1956ರವರೆಗೆ ಇಲ್ಲಿ ಉತ್ಪಾದನೆಯಾದ ಚಿನ್ನ 2827 ಕಿಲೋ ಗ್ರಾಂ,

1956ರಲ್ಲಿ ಕರ್ನಾಟಕದ ಏಕೀಕರಣವಾದುದರಿಂದ ಹೈದರಾಬಾದಿನ ಆಡಳಿತದಿಂದ ರಾಯಚೂರು ಜಿಲ್ಲೆ ಕರ್ನಾಟಕದ ವ್ಯಾಪ್ತಿಗೆ ಬಂದದ್ದರಿಂದ ಗಣಿಯ ಸ್ವಾಮ್ಯವು ಕರ್ನಾಟಕಕ್ಕೆ ಬಂತು. ಈಗ ಹಟ್ಟಿ ಗೋಲ್ಟ್ ಮೈನ್ಸ್ ಕಂಪನಿ ಇಲ್ಲಿ ಚಿನ್ನವನ್ನು ಉತ್ಪಾದಿಸುತ್ತಿದೆ. ಕೋಲಾರದಲ್ಲಿರುವಂತೆ ಇಲ್ಲಿನ ಗಣಿಗಳಿಗೂ ತಮ್ಮದೇ ಆದ ತಾಂತ್ರಿಕ ಅನುಕೂಲಗಳಿವೆ. ಚಿನ್ನವನ್ನು ಸಂಸ್ಕರಿಸುವ ಸ್ಥಾವರವಿದೆ. ಕೃಷ್ವಾ ನದಿಯ ಜಲ ವಿದ್ಯುತ್ ಪೂರೈಕೆ ಇದೆ. ದಿನಮೊಂದರಲ್ಲಿ 910 ಟನ್ನು ಅದುರನ್ನು ನಿರ್ವಹಿಸುವ ಸಾಮಥ್ರ್ಯ ಇಲ್ಲಿನ ಸ್ಥಾವರಗಳಿಗಿದೆ.

ಕ್ರಿ.ಶ. 1995ರವರೆಗೆ ಹಟ್ಟಿ ಚಿನ್ನದ ಗಣಿಗಳು ಮೂವತ್ತೆಂಟು ಟನ್ನು ಚಿನ್ನ ಉತ್ಪಾದಿಸಿವೆ. ಮಾರುಕಟ್ಟೆಗೆ ಬಿಟ್ಟು ನೇರವಾಗಿ ಮಾರಾಟ ಮಾಡಿದ್ದರೆ ಈ ಗಣಿಗಳು ಹೇರಳ ಲಾಭ ಸಂಪಾದನೆ ಮಾಡುತ್ತಿದ್ದವು. ಚಿನ್ನದ ನಿಯಂತ್ರಣ ಕಾಯಿದೆಯಿಂದಾಗಿ 1963ರಿಂದ ಚಿನ್ನದ ಉತ್ಪಾದನೆಗೆ ತಕ್ಕ ಬೆಲೆ  ಸಿಕ್ಕದೆ ಉಸಿರು ಬಿಗಿ ಹಿಡಿಯುವ ಪರಿಸ್ಥಿತಿಯುಂಟಾಗಿತ್ತು. ಉತ್ಪಾದನೆಯಾದ ಚಿನ್ನವನ್ನು ಸರ್ಕಾರಕ್ಕೆ ಮಾರಬೇಕು. ಆದರೆ ಉತ್ಪಾದಿಸಿದ ಎಲ್ಲ ಮೊತ್ತದ ಚಿನ್ನವನ್ನು ಸರ್ಕಾರ ಕೊಂಡುಕೊಳ್ಳುತ್ತಿರಲಿಲ್ಲ. 1958ರವರೆಗೆ ಇಲ್ಲಿಯ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಅವಕಾಶವಿತ್ತು. ಅಂದಿನ ಮಾರುಕಟ್ಟೆ ಬೆಲೆಗೆ ಸರ್ಕಾರ ಚಿನ್ನವನ್ನು ಕೊಳ್ಳುತ್ತಿತ್ತು.  ಚಿನ್ನದ ನಿಯಂತ್ರಣ ಕಾಯ್ದೆಯ ರೀತ್ಯಾ ಚಿನ್ನವನ್ನು ಸೀಮಿತ ಕೈಗಾರಿಕೆ ಬಳಕೆಗೆ ಮಾರುವ ಅವಕಾಶ ಇತ್ತು. ಕ್ರಿ.ಶ. 1978-79ರಲ್ಲಿ ಹಟ್ಟಿ ಚಿನ್ನದ ಸಂಸ್ಥೆಯಿಂದ ಸರ್ಕಾರ ಕೊಂಡ ಚಿನ್ನ ಕೇವಲ 881 ಕಿಲೋ ಗ್ರಾಂ. ಆ ವರ್ಷ ಗಣಿ ಉತ್ಪಾದಿಸಿದ ಚಿನ್ನ 960 ಕಿಲೋ ಗ್ರಾಂ. ಇಂಥ ನೀತಿಯಿಂದಾಗಿ ಗಣಿ ಸಂಸ್ಥೆಗಳು ನಷ್ಟ ಅನುಭವಿಸಬೇಕಾಗಿ ಬಂತು. 1948ರಿಂದ ಹಟ್ಟಿ ಗಣಿಗಳಲ್ಲಿ ತೋಡಿರುವ ಸುರಂಗಗಳನ್ನು ಸಾಲಾಗಿ ಜೋಡಿಸಿದರೆ 123.5 ಕಿಲೋ ಮೀಟರು ದೂರ ಸಾಗುತ್ತದೆ. ಎಂದರೆ ಕೋಲಾರದ ಚಿನ್ನದ ಗಣಿಗಳ ಹತ್ತನೆಯ ಒಂದು ಭಾಗದಷ್ಟು. ಹಟ್ಟಿಯ ಸುತ್ತ ಮುತ್ತ ಒಟ್ಟು ಒಂಬತ್ತು ಚಿನ್ನದ ಸಿರಗಳಿವೆ. ಇದರಲ್ಲಿ ಮುಖ್ಯ ಸಿರದ ಮೇಲೆ ತೋಡಿರುವ ಗಣಿ 1140 ಮೀಟರು ಆಳಕ್ಕಿಳಿದಿದೆ. 1948ರಿಂದ 1958ರವರೆಗೆ ಹಟ್ಟಿ ಚಿನ್ನವನ್ನು ಹೈದರಾಬಾದಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. 1958ರಿಂದ 1963ರವರೆಗೆ ಕೇಂದ್ರ ಸರ್ಕಾರ ಮಾರುಕಟ್ಟೆಯ ಬೆಲೆಗೆ ಈ ಚಿನ್ನವನ್ನು ಖರೀದಿಸುತ್ತಿತ್ತು. 1963ರ  ನಂತರ ಚಿನ್ನದ ವಹಿವಾಟು ಚಿನ್ನದ ಮಿಯಂತ್ರನದ ಕಾಯ್ದೆಗೆ ಒಳಪಟ್ಟಿತು. ಪರವಾನಗಿ ಪಡೆದವರಿಗೆ ಮಾತ್ರ ಸ್ಟೇಟ್ ಬ್ಯಾಂಕ್ ಮೂಲಕ ಚಿನ್ನವನ್ನು ಒದಗಿಸಲಾಗುತ್ತಿತ್ತು. ಮುಂಬೈನ ಟಂಕಸಾಲೆ, ಹಟ್ಟಿ ಚಿನ್ನವನ್ನು 10, 50, 100, 500, 1000 ಗ್ರಾಂನ ಗಟ್ಟಿಗಳನ್ನಾಗಿ ಎರಕ ಹೊಯ್ಯುತ್ತದೆ. ಹಟ್ಟಿ ಚಿನ್ನದ ಪರಿಶುದ್ಧತೆ 999.5.

ಹಟ್ಟಿ ಚಿನ್ನದ ಗಣಿ ಪ್ರದೇಶದ ಭೂವಿಜ್ಞಾನ

ಕೋಲಾರದ ಚಿನ್ನದ ನಿಕ್ಷೇಪಗಳಂತೆಯೇ ಹಟ್ಟಿ ಚಿನ್ನದ ನಿಕ್ಷೇಪಗಳಿಗೂ ಜ್ವಾಲಾಮುಖಿ ಜನ್ಯ ಶಿಲೆಗಳೇ ಮೂಲ. ಈ ಬಗೆಯ ಶಿಲೆಗಳಿಗೆ  ಥೋಲಿಯೈಟ್ ಎಂದು ಹೆಸರು; ಬಸಾಲ್ಟ್ ಶಿಲೆಯ ಒಂದು ಬಗೆ. ಈ ಪ್ರದೇಶದಲ್ಲಿ ಆಮ್ಲೀಯ ಜ್ವಾಲಾಮುಖಿಯ ಶಿಲೆಗಳ ಪ್ರಮಾಣ ತುಂಬ ಕಡಿಮೆ. ಅಂತೆಯೇ ಸಂಚಯನ ಶಿಲೆಗಳೂ ಕೂಡ ಅಪ್ರಧಾನ. ಇಲ್ಲಿನ ಶಿಲೆಗಳು ಭಾರಿ ಪ್ರಮಾಣದಲ್ಲಿ ರೂಪಾಂತರಗೊಂಡಿವೆ. ಸ್ವರ್ಣ ಸಿರಗಳಿರುವುದು ಬಿರುಕು, ಸೀಳುಗಳಿಂದ ಛಿದ್ರವಾದ ಕ್ಷಾರ ಶಿಲೆಗಳಲ್ಲಿ. ಬಿರುಕುಗಳೇ ಖನಿಜೀಕರಣವನ್ನು ನಿಯಂತ್ರಿಸಿದೆ. ಮೆಯ್ನ್ ರೀಫ್, ಓಕ್ಲೆ ರೀಫ್, ವಿಲೇಜ್ ರೀಫ್ ಮುಂತಾಗಿ ಒಂಬತ್ತು ಸ್ವರ್ಣ ಸಿರಗಳಿದ್ದರೂ ಮುಖ್ಯ ಗಣಿ ಅಭಿವೃದ್ಧಿಯಾಗಿದ್ದು ಮೆಯ್ನ್ ರೀಫ್‍ನಲ್ಲಿ. 1895ರಿಂದ 1919ರವರೆಗೂ ಈ ಭಾಗದ ಗಣಿ ಹೆಚ್ಚು ಅಭಿವೃದ್ದಿಯಾಗಿದೆ. ಹಿಂದೆ ಟನ್ನೊಂದಕ್ಕೆ 19 ಗ್ರಾಂ ಚಿನ್ನವಿರುವ ಬೆಣಚನ್ನು ಮಾತ್ರ ಗಣಿ ಮಾಡಿದ್ದಾರೆ, ಸಲ್ಫೈಡ್ ಖನಿಜಗಳಿರುವ ನಿಕೃಷ್ಟ ದರ್ಜೆಯ ಬೆಣಚನ್ನು ಗಣಿ ಮಾಡದೆ ಬಿಟ್ಟಿದ್ದಾರೆ.

ಹಟ್ಟಿ ಗಣಿಗಳ ಚಿನ್ನದ ಉತ್ಪಾದನೆ
 (ಅದುರಿನ ಪ್ರಮಾಣ ದಶಲಕ್ಷ ಟನ್ನುಗಳಲ್ಲಿ)

ವರ್ಷ
ಸಂಸ್ಕರಿಸಿದ ಅದುರಿನ ಪ್ರಮಾಣ
ಚಿನ್ನದ ಉತ್ಪಾದನೆ (ಟನ್ನುಗಳಲ್ಲಿ)

1950ರವರೆಗೆ
0.031
 0.28

1951ರಿಂದ 1960
0.696
 4.46

1961ರಿಂದ 1970
1.036
 8.11

1971ರಿಂದ 1980
1.656
11.20

1980ರಿಂದ 1990
1.541
 8.64

1991ರಿಂದ 1994
1.013
 5.22

ಒಟ್ಟು			5.973				37.91

ಈಗ ಉಳಿದ ಸ್ವರ್ಣ ಸಿರಗಳ ಅಭಿವೃದ್ಧಿ ಮಾಡಿದರೆ 750 ಮೀಟರು ಆಳದವರೆಗೆ ಮೂವತ್ತು ದಶಲಕ್ಷ ಟನ್ನು ಚಿನ್ನದ ಅದುರಿನ ಮೀಸಲು ನಿಕ್ಷೇಪವಿದೆಯೆಂದು ಸಮೀಕ್ಷೆಗಳು ದೃಢಪಡಿಸಿವೆ. ಈ ಪೈಕಿ ಟನ್ನಿಗೆ 6.3 ಗ್ರಾಂ ಚಿನ್ನವಿರುವ ಆರು ದಶಲಕ್ಷ ಟನ್ನು ಅದುರನ್ನು ಈಗಾಗಲೇ ಗಣಿ ಮಾಡಿ ತೆಗೆಯಲಾಗಿದೆ.

ಗದುಗಿನ ಚಿನ್ನದ ನಿಕ್ಷೇಪಗಳು

ಗದುಗು ಬಹು ಹಿಂದಿನಿಂದ ಮೆಕ್ಕಲು ಚಿನ್ನಕ್ಕೆ ಹೆಸರುವಾಸಿ. ಈ ಪ್ರಾಂತ್ಯದಲ್ಲಿ ಹನ್ನೆರಡನೆಯ ಶತಮಾನದಲ್ಲಿ  ಜಾಲಗಾರರು ಚಿನ್ನ ಸೋಸುತ್ತಿದ್ದ ಉದ್ಯಮವನ್ನು ತಿಳಿಸುವ ಶಾಸನವೊಂದು ದೊರೆತಿದೆ. `ಜರಗಿನ ತೆರೆ ಎಂಬ ಕರವನ್ನು ಚಿನ್ನ ಸೋಸುವ ಉದ್ಯಮಕ್ಕೆ ಹಾಕಲಾಗುತ್ತಿತ್ತು. ಅದರ ಮೇಲ್ವಿಚಾರಕ ಜರಗಿನ ತೆರೆಯ ಅಧಿಕಾರಿ. ಗದುಗು ತಾಲ್ಲೂಕಿನ ಕುರ್ತುಕೋಟಿಯ ವಿರೂಪಾಕ್ಷ ದೇವಾಲಯದ ಕಂಬದಲ್ಲಿ ದೇವರ ಸೇವೆಗೆಂದು ಜರಗಿನ ತೆರೆಯಲ್ಲಿ ಒಂದು ದೋಣಿಯ ತೆರೆಯನ್ನು ಬಿಡಲಾಗಿದೆ ಎಂದು ನಮೂದಿಸಿದೆ. ಅಲ್ಲಿ ಚಿನ್ನವನ್ನು  ಸೋಸುವ ಉದ್ಯಮ ಸಾಕಷ್ಟು ಪ್ರಸಿದ್ಧಿಯಾಗಿತ್ತೆಂಬುದನ್ನು ಇದು ತೋರಿಸುತ್ತದೆ. (ಬೊಂಬಾಯಿ ಕರ್ನಾಟಕ ಶಾಸನ ನಂ. 200 ಕ್ರಿ.ಶ. 1926).

ಗದುಗಿನ ಕಪ್ಪತ್ತಗುಡ್ಡದ ಪ್ರದೇಶ ಚಿನ್ನಭರಿತವಾದದ್ದು. ಶಿರಹಟ್ಟಿ ತಾಲ್ಲೂಕನ್ನೊಳಗೊಂಡು ದಕ್ಷಿಣದಲ್ಲಿ ತುಂಗಭದ್ರಾ ನದಿಯವರೆಗೂ ಸುಮಾರು ಅರವತ್ತು ಕಿಲೋ ಮೀಟರು ದೂರ ಹಾಯುವ ಈ ರಮಣೀಯ ಗಿರಿಸಾಲು ಸ್ವರ್ಣಭರಿತ ಶಿಲೆಯಿಂದ ಕೂಡಿದೆ. ಈ ಪ್ರದೇಶದ ಹರವು 50 ಚದರ ಕಿಲೋಮೀಟರಿಗೂ ಮಿಗಿಲು. ಕ್ರಿ.ಶ. 1840ರಲ್ಲಿ ದೋಣಿ ಮತ್ತು ಸುರಟೂರಿನ ತೊರೆಗಳಿಂದ ವರ್ಷಕ್ಕೆ ಸುಮಾರು ಆರು ಕಿಲೋ ಗ್ರಾಂ ಚಿನ್ನವನ್ನು ಸೋಸಿ ತೆಗೆಯುತ್ತಿದ್ದ ವರದಿಗಳಿವೆ. ಗದುಗಿನ ಕಪ್ಪತ್ತಗುಡ್ಡದ ಸುತ್ತಮುತ್ತ ಪ್ರಾಚೀನರು ಚಿನ್ನವನ್ನು ಅರೆಯಲು ಬಳಸಿದ ಕಲ್ಲುಗಳು, ಒರಳುಕಲ್ಲು, ಕುಟ್ಟುವ ಕಲ್ಲು ಹಲವಾರು ದೊರೆತಿವೆ. ಧಾರವಾಡ ಗೋಲ್ಡ್ ಕಂಪನಿ, ಕಳೆದ ಶತಮಾನದ ಕೊನೆಯಲ್ಲಿ 1,70,000 ಪೌಂಡ್ ಬಂಡವಾಳ ಹೂಡಿ ಅತ್ತಿಕಟ್ಟೆ ಬಳಿ ಗಣಿ ತೋಡಿತು. ಅತ್ತಿಕಟ್ಟೆಯ ದಕ್ಷಿಣದ ಸ್ವರ್ಣಭರಿತ ಬೆಣಚು ಸಿರವನ್ನು ಸಾಂಗ್ಲಿ ಗೋಲ್ಡ್ ಮೈನ್ಸ್ ಕಂಪನಿ ಗಣಿ ಮಾಡಿತು. ಈ ಕಂಪನಿ ತೊಡಗಿಸಿದ ಬಂಡವಾಳ 75,000 ಪೌಂಡ್, ಇದಕ್ಕೂ ಪುರಾತನ ಚಿನ್ನದ ಗಣಿಗಳೇ ಆಧಾರ.

ಕೋಲಾರದ ಛಾಂಪಿಯನ್ ರೀಫ್ ಕಂಪನಿ ಗದುಗಿನ ಹೊಸೂರು ಬಳಿ ಗಣಿ ಆರಂಬಿsಸಿ ಕ್ರಿ.ಶ. 1911ರಲ್ಲಿ ಕಬುಲಿಯಾತ್ ಕಟ್ಟೆಯಲ್ಲಿ ಗಣಿ ಕಾರ್ಯಾಚರಣೆ ನಡೆಸಿತು. ಸುಮಾರು ನೂರ ಅರವತ್ತು ಮೀಟರು ಆಳ ಅಭಿವೃದ್ಧಿ ಪಡಿಸಿತು. ಇದರ ಬಳಿಯೇ ಚಿನ್ನವನ್ನು ಶುದ್ಧೀಕರಿಸುವ ಸಯನೈಡ್ ಸ್ಥಾವರವನ್ನು ತೆರೆದು ಒಟ್ಟಾರೆ 666 ಕಿಲೋ ಗ್ರಾಂ ಚಿನ್ನವನ್ನು ಗದುಗಿನ ಚಿನ್ನದ ಗಣಿಗಳು ಉತ್ಪಾದಿಸಿವೆ.

ಕಪ್ಪತ್ತಗುಡ್ಡದ ಪಶ್ಚಿಮಕ್ಕೆ ಮಾಲಿಂಗಪುರ, ಹೊಸೂರು, ಶಿರೂರು, ಎಲೆಶಿರೂರು ಈ ಭಾಗಗಳಲ್ಲಿ ಗಣಿ ಕಾರ್ಯಾಚರಣೆ ತೀವ್ರ ಗತಿಯಲ್ಲಿ ನಡೆದಿದೆ. ಕ್ರಿ.ಶ. 1939ರಲ್ಲಿ ನಾರಾಯಣದಾಸ್ ಗಿರಿಧರ ದಾಸ್, 1950ರಲ್ಲಿ ಮೆಸರ್ಸ್ ಆಕ್ಲೆ ಡಂಕನ್ ಕಂಪನಿ, ಗದುಗಿನ ಹೊಸೂರು ಬಳಿಯ ಗಣಿಯನ್ನು ಅಬಿsವೃದ್ಧಿ ಮಾಡಿದವು. ಕಬುಲಿಯಾತ್ ಕಟ್ಟೆ ಗಣಿ 527 ಕಿಲೋ ಗ್ರಾಂ ಚಿನ್ನವನ್ನು ಕೊಟ್ಟಿದೆ. ಇದರ ದಕ್ಷಿಣಕ್ಕಿರುವ ಅತ್ತಿಕಟ್ಟೆ ಗಣಿ ಮಾಡುವ ಮೊದಲು ಅಲ್ಲಿನ ಬೆಣಚು ಕಲ್ಲಿನಲ್ಲಿ ಹೊಳೆಯುತ್ತಿದ್ದ ಚಿನ್ನದ ರೇಖುಗಳನ್ನು ಕಾಣಬಹುದಾಗಿತ್ತೆಂದು ಬ್ರೂಸ್‍ಫುಟ್ ವರದಿ ಮಾಡಿದ್ದಾನೆ. ಇಲ್ಲಿ ಎರಡು ಕೂಪಗಳು 120.4 ಹಾಗೂ 52.75 ಮೀಟರು ಆಳ ಇಳಿದಿವೆ. ಮೂರು ಹಂತದಲ್ಲಿ  ಗಣಿ ಕಾರ್ಯಾಚರಣೆ ನಡೆದಿದೆ. ಅತ್ತಿಕಟ್ಟೆಯ ಗಣಿಗೆ ದಕ್ಷಿಣಕ್ಕಿರುವ ಮೈಸೂರು ಗಣಿಗಳಲ್ಲಿ ನಾಲ್ಕು ಕೂಪಗಳನ್ನು 350 ಅಡಿ  ಆಳದವರೆಗೆ ಗಣಿ ಮಾಡಿದ್ದಾರೆ. ಈ ಗಣಿಯೊಳಗೆ ಚಿನ್ನವನ್ನು ಹೊಂದಿರುವ ಮೂರು ಬೆಣಚುಕಲ್ಲಿನ ಸಿರಗಳು ಪತ್ತೆಯಾಗಿವೆ. ಗಣಿಯೊಳಗೆ ಸುರಂಗಗಳೂ ವಿಸ್ತರಿಸಿವೆ.

ಸಾಂಗ್ಲಿ ಗೋಲ್ಡ್ ಮೈನಿಂಗ್ ಕಂಪನಿ ಗಣಿ ಮಾಡಿರುವ ಸಾಂಗ್ಲಿ ಗಣಿಗಳು ಮೈಸೂರು ಗಣಿಗಳ ದಕ್ಷಿಣಕ್ಕಿವೆ. ಕಬುಲಿಯಾತ್ ಕಟ್ಟೆಯ ಪಶ್ಚಿಮಕ್ಕೆ ಆರು ಕಿಲೋ ಮೀಟರು ದೂರವಿರುವ ಹೊಸೂರು ಛಾಂಪಿಯನ್ ರೀಫ್ ಗಣಿಗಳು ಉತ್ಕøಷ್ಟ ಚಿನ್ನದ ಅದುರನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಕಪ್ಪತ್ತಮಲ್ಲಯ್ಯನ ಮಠವಿರುವ ಬಳಿ ಹರಿಯುವ ಹಳ್ಳದಲ್ಲಿ ಹಾಗೂ ಸುರಟೂರಿನ ಬಳಿ ಜಾಲಗಾರರ ತಂಡೋಪತಂಡಗಳು ಕ್ರಿ.ಶ. 1874ರಲ್ಲೇ ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಸೋಸುತ್ತಿದ್ದವು. ಇದರಂತೆ ಸುರಟೂರು ದೋನಿ, ಜೆಲಿಗಾಂ ಮುಂತಾದ ಕಪ್ಪತ್ತಗುಡ್ಡದ ಪಶ್ಚಿಮ ಇಳಿಜಾರಿನ ತೊರೆಗಳಲ್ಲಿ ಮೆಕ್ಕಲು ಚಿನ್ನ ಧಾರಾಳವಾಗಿ ದೊರೆತಿದೆ. ಮರದ ಹಲಗೆಗಳನ್ನು ತಟ್ಟೆಗಳನ್ನಾಗಿ ಬಳಸಿ, ಮಳೆ ನಿಂತ ನಂತರ ಮೆಕ್ಕಲು ಚಿನ್ನವನ್ನು ಸೋಸಲು ಸುತ್ತಮುತ್ತಲಿನ ಜನ ಬರುತ್ತಿದ್ದುದನ್ನು ಬ್ರೂಸ್‍ಫುಟ್ ಸುದೀರ್ಘವಾಗಿ ವಿವರಿಸಿದ್ದಾನೆ. ತಮ್ಮ ಉದ್ಯಮದ ಗುಟ್ಟನ್ನು ಬಹಿರಂಗಗೊಳಿಸದೆ ಅಲ್ಲಿನ ಜಾಲಗಾರರು ಯೂರೋಪಿನ ಭೂವಿಜ್ಞಾನಿಗಳ ಚಿನ್ನದ ಅನ್ವೇಷಣೆಯ ಉತ್ಸಾಹಕ್ಕೆ ಭಂಗ ತರುತ್ತಿದ್ದರಂತೆ. ಚಿನ್ನ ಸೋಸುವ ಇವರ ಕಲೆಗಾರಿಕೆಯನ್ನು ಬ್ರಿಟನ್ನಿನ ಗಣಿ ತಜ್ಞ ಸ್ಕೋಲ್ಪ್ ಎಂಬುವನು ಮೆಚ್ಚಿ ಕಪ್ಪತ್ತಗುಡ್ಡದ ಜಾಲಗಾರರ ನೈಪುಣ್ಯ ಆಸ್ಟ್ರೇಲಿಯದಲ್ಲಿ ನೂಕುನುಗ್ಗಲಾದಾಗ ಅಲ್ಲಿಗೆ ಬಂದಿದ್ದ ಚಿನ್ನದ ಜಾಲಗಾರರ ನೈಪುಣ್ಯಕ್ಕಿಂತ ಅತಿ ಹೆಚ್ಚಿನದೆಂದು ಹೊಗಳಿದ್ದಾನೆ. ತಾನು ಅಂಥ ಕುಶಲ ಜಾಲಗಾರರನ್ನು ಕಂಡಿಯೇ ಇಲ್ಲ ಎಂದು ಬರೆದಿದ್ದಾನೆ. ಆಗ ಚಿನ್ನದ ಅಂತಾರಾಷ್ಟ್ರೀಯ ಬೆಲೆ ಒಂದು ಔನ್ಸ್‍ಗೆ ಮೂರು ಪೌಂಡ್ ಹದಿನೇಳು ಷಿಲ್ಲಿಂಗ್ ಆರು ಪೆನ್ನಿ ಇತ್ತು. ಈ ಪ್ರಾಂತ್ಯದಲ್ಲಿ ವರ್ಷವೊಂದರಲ್ಲಿ ಜಾಲಗಾರರ ಆದಾಯ ಐದರಿಂದ ಐವತ್ತು ರೂಪಾಯಿಗಳಷ್ಟಿತ್ತು. ಸುರಟೂರು ದೋಣಿ ತೊರೆಗಳ ಮೆಕ್ಕಲಿನಿಂದ ವರ್ಷಮೊಂದರಲ್ಲಿ ಇನ್ನೂರು ಔನ್ಸ್ ಚಿನ್ನ ದೊರೆಯುತ್ತಿದ್ದರೂ ಆ ಕಾಲದಲ್ಲಿ ಈ ಉದ್ಯಮ ಆಕರ್ಷಣೆಯನ್ನು ಕಳೆದುಕೊಳ್ಳುವ ಹಂತಕ್ಕೆ ತಲಪಿತ್ತು. ಗದುಗಿನ ಮೈಸೂರು ಗಣಿಯನ್ನು ಹಟ್ಟಿ ಚಿನ್ನದ ಕಂಪನಿ ಸಾಂಗ್ಲಿ ಗಣಿಗಳನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ಕಾರ್ಪೊರೇಷನ್, ಹೊಸೂರು ಗಣಿಗಳನ್ನು ಭಾರತ ಗೋಲ್ಡ್ ಮೈನಿಂಗ್ ಕಂಪನಿ ಈಗ ಅಭಿವೃದ್ಧಿ ಪಡಿಸುತ್ತಿವೆ.

ಸ್ವರ್ಣ ಸಿರಗಳು

ಗದುಗಿನ ಪದರ ಶಿಲಾ ಜಾಡಿನಲ್ಲಿ  ಪ್ರಮುಖವಾಗಿ ಮೂರು ಸಿರಗಳು ಸ್ವರ್ಣಭರಿತವಾಗಿವೆ. ಪಶ್ಚಿಮ ಸಿರ, ಮಧ್ಯ ಹಾಗೂ ಪೂರ್ವ ಸಿರ ಸಮೂಹಗಳು. ಇವುಗಳ ಪೈಕಿ ಪಶ್ಚಿಮ ಸಿರ ರೂಪಾಂತರಿತ ಬಸಾಲ್ಟ್ ಮತ್ತು ಆಮ್ಲೀಯ ಜ್ವಾಲಾಮುಖಿ ಶಿಲೆಯಲ್ಲಿದೆ. ಮಧ್ಯದ ಸಿರ ಜ್ವಾಲಾಮುಖಿ ಶಿಲೆ ಮತ್ತು ರೂಪಾಂತರಿತ ಜಲಜ ಶಿಲೆಗಳ ಸಂಪರ್ಕ ಭಾಗದಲ್ಲಿದೆ. ಪೂರ್ವ ಸಿರ ಸಂಪೂರ್ಣವಾಗಿ ಗ್ರೆವೇಕ್ ಎಂಬ ಜಲಜ ಶಿಲೆಗಳಲ್ಲಿ ನೆಲೆಯಾಗಿದೆ. ಈ ಎಲ್ಲ ಸಿರಗಳ ಒಟ್ಟು ಉದ್ದ 32 ಕಿಲೋ ಮೀಟರು.  

ಪಶ್ಚಿಮ ಸಿರ ಸಮೂಹದಲ್ಲಿ ಹೊಸೂರು, ಛಾಂಪಿಯನ್, ಎಲ್‍ಸಿರೂರು, ವೆಂಕಟಾಪುರ ಗಣಿಗಳಿವೆ. ಮಧ್ಯದ ಸಿರದಲ್ಲಿ ಕಬುಲಿಯಾತ್ ಕಟ್ಟೆ, ಅತ್ತಿ ಕಟ್ಟೆ, ಸಾಂಗ್ಲಿ, ಮೈಸೂರು ಗಣಿಗಳಿವೆ. ಪೂರ್ವ ಸಿರದಲ್ಲಿ ಸಂಕತೊಡಕ ಗಣಿ ಇದೆ. ಈ ಪೈಕಿ ಹೊಸೂರು ಛಾಂಪಿಯನ್ ಸಿರ 4.238 ಟನ್ನು ಚಿನ್ನವಿರುವ 1630 ದಶಲಕ್ಷ ಟನ್ನು ಅದುರನ್ನು. ಮೈಸೂರು ಗಣಿ 0.690 ಟನ್ನು ಚಿನ್ನವಿರುವ 0.230 ದಶಲಕ್ಷ ಟನ್ನು ಅದುರನ್ನು, ಸಾಂಗ್ಲಿ ಗಣಿ 4.143 ಟನ್ನು  ಚಿನ್ನವಿರುವ 1.099 ದಶಲಕ್ಷ ಟನ್ನು ಅದುರನ್ನು ಹೊಂದಿರುವುದಾಗಿ ಪರಿಶೋಧನೆಗಳಿಂದ ಖಚಿತವಾಗಿದೆ. 

ಕರ್ನಾಟಕದ ಪ್ರಮುಖ ಪುರಾತನ ಚಿನ್ನದ ಗಣಿಗಳು ಮತ್ತು ಗಣಿಗಾರಿಕೆ
ಕರ್ನಾಟಕದ ಬಹು ಭಾಗವನ್ನು ಪ್ರಾಚೀನರು ಚಿನ್ನಕ್ಕಾಗಿ ಶೋಧಿಸಿದ್ದಾರೆ. ಶೋಧಿಸಿದ ಸ್ಥಳಗಳಲ್ಲಿ ಹಳೆಯ ಗಣಿಗಳಿವೆ. ಕೆಲವು ತುಂಬ ಆಳವಾಗಿವೆ ಮತ್ತೆ ಕೆಲವು ಕೇವಲ ಒಬ್ಬ ವ್ಯಕ್ತಿ ಇಳಿಯಬಹುದಾದಷ್ಟು ಇಕ್ಕಟ್ಟಿನ ಗಣಿಗಳು. ಪ್ರಾಚೀನರಿಗೆ ಯಾವ ಶಿಲೆ ಸ್ವರ್ಣಭರಿತವಾಗಿವೆ ಎಂಬುದರ ಸ್ಪಷ್ಟ ಕಲ್ಪನೆ ಇತ್ತು. ಕೋಲಾರ, ಹಟ್ಟಿ, ಗದುಗು ಪ್ರದೇಶಗಳಲ್ಲದೆ ರಾಜ್ಯದ ಅನೇಕ ಭಾಗಗಳಲ್ಲಿ ಪುರಾತನ ಗಣಿಗಳಿವೆ. ಬಹುತೇಕ ಧಾರವಾಡ ಶಿಲಾ ಸಮೂಹಕ್ಕೆ ಇವು ಸೀಮಿತವಾಗಿವೆ. ಆಧುನಿಕ ಗಣಿ ಕಾರ್ಯಾಚರಣೆಗೆ ಈ ಪ್ರಾಚೀನ ಚಿನ್ನದ ಗಣಿಗಳೇ ಕೈಮರವಾಗಿವೆ. ಪ್ರಾಚೀನ ಗಣಿಗಳನ್ನು ಅನುಸರಿಸಿದ್ದರಿಂದ ಕೋಲಾರದ ಚಿನ್ನದ ಗಣಿಯ ಇತಿಹಾಸವೇ ಬದಲಾಯಿತು. 

ಕರ್ನಾಟಕದಲ್ಲಿ ಚಿನ್ನ ದೊರೆಯುವ ಸ್ಥಳಗಳು

ಧಾರವಾಡ - ಶಿವಮೊಗ್ಗ ಪದರ ಶಿಲಾ ಜಾಡು
ಕರ್ಜಗಿ				ಚಿನ್ನಮುಳುಗುಂದ				ಕುದುರೆಕೊಂಡ
ಪಲ್ಲವನಹಳ್ಳಿ			ಚೋರನ ಎಡೆಹಳ್ಳಿ				ಹೊನ್ನಹಟ್ಟಿ
ಹೊಸೂರು			ತಂಬಡಿ-ಹಳ್ಳಿ				ಜಾಲಗಾರ ಗುಂಡಿ
ಸಿದ್ಧರಹಳ್ಳಿ			ನಂದಿ					ಬುಕ್ಕಾಂಬುಧಿ
ಹೊನ್ನನಾಯಕನ ಹಳ್ಳಿ		ಕಾರ್ತಿಕೆರೆ-ಕಳಾಸಪುರ			ದೇವರಕಲ್ಲು

ನುಗ್ಗೇಹಳ್ಳಿ ಪದರ ಶಿಲಾ ಜಾಡು
ಯಲವಾರೆ ಗೊಲ್ಲರಹಳ್ಳಿ		ಜಾಲಗಾರನ ಹಳ್ಳಿ				ಆಲದ ಹಳ್ಳಿ-ಹೊನ್ನೇನಹಳ್ಳಿ
ತಗಡೂರು			ಕೆಂಪಿನಕೋಟೆ
ಹೊಳೆನರಸೀಪುರ ಪದರ ಶಿಲಾ ಜಾಡು
ಆನೇಕೆರೆ ಕಲ್ಲೇನ ಹಳ್ಳಿ
ಚಿತ್ರದುರ್ಗ ಪದರ ಶಿಲಾ ಜಾಡು
(ಗದಗು ವಿಭಾಗ)
ಹೊಸೂರು-ಶಿರುಂಜ್		ಯೆಲ್‍ಸಿರೂರು-ವೆಂಕಟಾಪುರ		ನಗಾವಿ-ಬೆಲಾಡಿ-ನಭಾಪುರ
ಕಬೂಲಿಯಾಟಕಟ್ಟೆ-ಅತ್ತೀಕಟ್ಟೆ		ಮೈಸೂರು-ಸಾಂಗ್ಲಿ ಗಣಿ			

ಚಿತ್ರದುರ್ಗ ವಿಭಾಗ
ಕೊಂಗನಹೊಸೂರು		ಹೊನ್ನೇಮರಡಿ			ಚಿಕ್ಕಣ್ಣನಹಳ್ಳಿ
ಗುಡ್ಡದರಂಗವ್ವನ ಹಳ್ಳಿ		ಗೋಣೂರು-ಕೋಟೆಮರಡಿ		ಮದಕರಿಪುರ
ಕುಂಚಿಗನಹಾಳು			ಇಂಗಳದಾಳು			ಕಲ್ಲೇಹಡ್ಲು
ಹಳೇಕಲ್ಲು			

ಅಜ್ಜನಹಳ್ಳಿ - ಬೆಳ್ಳಾರ ವಿಭಾಗ

ಬೋದಿಮರಡಿ-ಹಿಪ್‍ಲಾರ		ದಿಂಡಾವರ			ಆನೆಸಿದ್ರಿ
ಜಾವಗೊಂಡನಹಳ್ಳಿ			ರಾಮೇನಹಳ್ಳಿ			ಅಜ್ಜನಹಳ್ಳಿ
ಬೆಳ್ಳಾರ				ಹೊನ್ನೇಬಾಗಿ

ನಾಗಮಂಗಲ ವಿಭಾಗ
ಕಾಳಿಂಗನಹಳ್ಳಿ			ನಾಗಮಂಗಲ			ಹುಂಜನಕೆರೆ

ಸಂಡೂರು ಪದರ ಶಿಲಾ ಜಾಡು
ಲಿಂಗದಹಳ್ಳಿ			ವಿಭೂತಿಗುಡ್ಡದ ದಕ್ಷಿಣ

ಕುಷ್ಟಗಿ ಪದರ ಶಿಲಾ ವಲಯ
ನರನಹಳ್ಳಿ				ಕಿಲಾರಹಟ್ಟಿ

ಮಂಗಳೂರು ಪದರ ಶಿಲಾ ವಲಯ
ಮೂಕನಗವಿ
ಹಟ್ಟಿ ಪದರ ಶಿಲಾ ಜಾಡು
ಹಟ್ಟಿ ಚಿನ್ನದ ಗಣಿ			ವೀರಾಪುರ		ತುಪ್ಪದೂರು
ಬುಧಿನಿ				ಮಸ್ಕಿ			ಸನ್‍ಬಾಲ್
ರಾಮರದಿಣ್ಣಿ			ಉದ್ಬಾಲ್			ಕಡೋಣಿ
ಊಟಿ				ವಂಡಳ್ಳಿ			ಚಿಂಚರ್ಗಿ
ಹಿರಾಬುದಿsನಿ			ಬುಲ್ಲಾಪುರ

ದೇವದುರ್ಗ ಪದರ ಶಿಲಾ ಜಾಡು
ಚಿಕ್ಕಹೊನ್ನಕುಣಿ

ಕೋಲಾರ ಪದರ ಶಿಲಾ ಜಾಡು
ಮಣಿಘಟ್ಟ				ಪಟ್ನ				ತಂಬಳ್ಳಿ
ಬ್ಯಾಟರಾಯನಬೆಟ್ಟ			ಕೆ.ಜಿ.ಎಫ್. ಪಶ್ಚಿಮ ಸಿರ		ಕೆ.ಜಿ.ಎಫ್. ಛಾಂಪಿಯನ್ ರೀಫ್

ದಕ್ಷಿಣದ ಉನ್ನತ ದರ್ಜೆಯ ಸಮ್ಮಿಶ್ರ ಶಿಲಾ ವಲಯ
ನಡಪನಹಳ್ಳಿ				ಕರೀಮಾದನಹಳ್ಳಿ				ಸೋವನಹಳ್ಳಿ
ವಳಗೆರೆ					ಅಂಬಳೆ					ಹಡಬನಟ್ಟ

ಪ್ರಮುಖ ಚಿನ್ನದ ಜಾಡುಗಳಲ್ಲದೆ ಕರ್ನಾಟಕದಲ್ಲಿ ಕಂಡು ಬಂದಿರುವ, ಆಧುನಿಕ ಖನಿಜ ಪರಿಶೋಧಕರ ಗಮನ ಸೆಳೆದಿರುವ ಕೆಲವು ಪ್ರಾಚೀನ ಗಣಿಗಳ ಸಂಕ್ಷಿಪ್ತ ವಿವರಣೆ :

ಬೆಳ್ಳಾರ ಚಿನ್ನದ ಗಣಿಗಳು :  ತುಮಕೂರು ಜಿಲ್ಲೆಯಲ್ಲಿ ಎರಡು ಪ್ರಮುಖ ಚಿನ್ನದ ಗಣಿಗಳಿವೆ. ಬೆಳ್ಳಾರ ಗಣಿಗಳು ಮತ್ತು ಅಜ್ಜನಹಳ್ಳಿ ಚಿನ್ನದ ಗಣಿಗಳು. ಈ ಎರಡೂ ಗಣಿಗಳನ್ನು ಆಧುನಿಕವಾಗಿಯೂ ಸಾಕಷ್ಟು ಶೋಧಿಸಿ ಚಿನ್ನವನ್ನು ಪಡೆಯಲಾಗಿದೆ. 

ಬೆಳ್ಳಾರ ಗಣಿ ಇರುವುದು ಸಿರಾ ಹುಳಿಯಾರು ರಸ್ತೆಯಲ್ಲಿ ಎರಡು ಕಿಲೋ ಮೀಟರು ಈಶಾನ್ಯಕ್ಕೆ. ಪ್ರಾಚೀನರು ಚಿನ್ನವನ್ನು ಶೋಸಿದ ಈ ಗಣಿಗಳಲ್ಲಿ ಉತ್ಖನನ ಮಾಡಿದಾಗ ಹಿಂದೆ ಗಣಿ ಕೆಲಸಗಾರರು ಬಳಸುತ್ತಿದ್ದ ಮಡಕೆ ಚೂರುಗಳು ಪತ್ತೆಯಾದವು. ಇವುಗಳನ್ನು ಆಧರಿಸಿ ಈಗ್ಗೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಪ್ರಾಚೀನರು ಇಲ್ಲಿ ಚಿನ್ನಕ್ಕಾಗಿ ಗಣಿ ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ಪ್ರಾಚ್ಯ ಸಂಶೋಧಕರು ವ್ಯಕ್ತಪಡಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಈ ಗಣಿಯನ್ನು ತೋಡಿರುವುದರಿಂದ ಇಂಡಿಯನ್ ಮೈನ್ಸ್ ಡೆವಲಪ್‍ಮೆಂಟ್ ಸಿಂಡಿಕೇಟ್ ಎಂಬ ಗಣಿಗಾರಿಕೆ ಸಂಸ್ಥೆ 1900-1908ರ ನಡುವೆ ಮತ್ತಷ್ಟು ಗಣಿ ಕಾರ್ಯ ಮಾಡಿತು. ಇಲ್ಲಿರುವ ಮೂಲ ಶಿಲೆಯನ್ನು ಹಿಂದೆ ಬೆಳ್ಳಾರ ಟ್ರಾ ್ಯಪ್ ಎನ್ನುತ್ತಿದ್ದರು. ಇದು ರೂಪಾಂತರಿತ ಬಸಾಲ್ಟ್ ಶಿಲೆ. ಇದನ್ನು ಅಡ್ಡ ಹಾಯ್ದಿರುವ ಬೆಣಚು ಶಿಲೆಗಳು ಸ್ವರ್ಣಭರಿತವಾಗಿವೆ.  ಈ ಭಾಗದಲ್ಲಿ ಎರಡು ಸಿರಗಳಿವೆ. ಒಂದು ಅಲ್ಲಿನ ಗುಡ್ಡದ ಮೇಲಿರುವ ಬೆಳ್ಳಾರ ಸಿರ. ಇನ್ನೊಂದು ಗುಡ್ಡದ ಪಾದದಲ್ಲಿರುವ ಕೆರೆಯ ಸಿರ. ಈ ಎರಡರಲ್ಲೂ ಕೂಪ ತೋಡಲಾಗಿದೆ. ಬೆಳ್ಳಾರ ಸಿರದ ಮೇಲೆ ಮೂರು ಕೂಪಗಳಿವೆ. ಕೆರೆಯ ಸಿರ ಭಾಗದಲ್ಲಿ ಹತ್ತು ಕೂಪಗಳಿವೆ. ಬೆಳ್ಳಾರ ಸಿರದಲ್ಲಿರುವ ಕೂಪಗಳು 70 ಮೀಟರು ಆಳಕ್ಕೆ ಇಳಿದಿವೆ. ಕೆರೆಯ ಸಿರದಲ್ಲಿ ಇವುಗಳ ಆಳ 122 ಮೀಟರು. 

ಹಳೆಯ ಗಣಿಗಳನ್ನು ಆಧರಿಸಿ ಮೈಸೂರು ಭೂವಿಜ್ಞಾನ ಇಲಾಖೆ 1944ರಿಂದ 1954ರ ವರೆಗೆ ಇಲ್ಲಿ ತೀವ್ರ ಪರಿಶೋಧನಾ ಕಾರ್ಯಕ್ರಮವನ್ನು  ಕೈಗೆತ್ತಿಕೊಂಡಿತು. ಕೆರೆಯ ಸಿರವನ್ನು ಎರಡು ಹಂತಗಳಲ್ಲಿ ಶೋಧಿಸಿ ಬೆಣಚು ಎಳೆಯನ್ನು ಛೇದಿಸಿದರೂ  ಉತ್ತಮ ದರ್ಜೆಯ ಅದುರು ದೊರೆಯಲಿಲ್ಲ. 1954ರಲ್ಲಿ ಜಾನ್ ಟೇಲರ್ ಕಂಪನಿ ಇಲ್ಲಿನ ಗಣಿಗಾರಿಕೆ ಲಾಭದಾಯಕವಲ್ಲವೆಂದು ವರದಿ ಮಾಡಿತು. ಮತ್ತೆ ದೊಡ್ಡ ಪ್ರಮಾಣದ ಗಣಿಗಾರಿಕೆ ಇಲ್ಲಿ ಮುಂದುವರಿಯಲಿಲ್ಲ. 1944ರಿಂದ 1954ರ ವರೆಗೆ ಬೆಳ್ಳಾರದ ಚಿನ್ನದ ಗಣಿಗಳು 62 ಕಿಲೋ ಗ್ರಾಂ ಚಿನ್ನವನ್ನು ಉತ್ಪಾದಿಸಿದೆ. ಹಿಂದೆ ಗಣಿ ಮಾಡಿ ವ್ಯರ್ಥ ಪದಾರ್ಥವೆಂದು ಶೇಖರಿಸಿದ್ದ ಶಿಲಾ ಪುಡಿಯಲ್ಲಿ ಸಾಕಷ್ಟು ಚಿನ್ನವಿತ್ತು. ಅದನ್ನು ಜಾಲಿಸಿ 1000 ತೊಲ ಚಿನ್ನವನ್ನು ಗಣಿ ಇಲಾಖೆ ಸಂಗ್ರಹಿಸಿತ್ತು. 

ಬೆಳ್ಳಾರದ ಗಣಿಗಳೂ ಕೂಡ ಚಿತ್ರದುರ್ಗ ಹಸುರು ಪದರ ಶಿಲಾ ವಲಯದ ಮಧ್ಯ ಇವೆ.  ಅದೇ ಜಾಡಿನಲ್ಲಿ ಉತ್ತರಕ್ಕೆ ಆನೆಸಿದ್ರಿ ಎಂಬ ಬಳಿಯೂ ಪುರಾತನ ಚಿನ್ನದ ಗಣಿಗಳಿವೆ. ಈ ವಲಯ ಸಾಕಷ್ಟು ಬಿರುಕಾಗಿದ್ದು ಅಲ್ಲಿ ಚಿನ್ನ ಸಂಗ್ರಹಣೆಗೆ ಅನುಕೂಲವಾಗಿದೆ. 

ಅಜ್ಜನಹಳ್ಳಿ ಗಣಿಗಳು

ಬೆಳ್ಳಾರದಿಂದ 12 ಕಿಲೋ ಮೀಟರು ಉತ್ತರಕ್ಕಿರುವ ಅಜ್ಜನಹಳ್ಳಿ ಗಣಿ ಕೂಡ  ಉತ್ತರ ದಕ್ಷಿಣವಾಗಿ ವಿಸ್ತರಿಸಿರುವ ಛಿದ್ರ ವಲಯದಲ್ಲಿ ನೆಲೆಯಾಗಿದೆ. ಚಿತ್ರದುರ್ಗದ ಹಸುರು ಶಿಲಾ ಪಟ್ಟಿಯಲ್ಲಿರುವ ಪಟ್ಟೆ ರೂಪದ ಕಬ್ಬಿಣ ಶಿಲೆಯಲ್ಲಿ ಚಿನ್ನ ದೊರೆಯುವುದು ಈ ಗಣಿಗಳ ವಿಶೇಷ. ಬರಿಗಣ್ಣಿಗೆ ಇಲ್ಲಿ ಚಿನ್ನ ಕಾಣಿಸುವುದಿಲ್ಲ. ಆದರೂ ಪ್ರಾಚೀನರು ಇವು ಸ್ವರ್ಣಭರಿತ ಶಿಲೆಗಳೆಂದು ಗುರುತಿಸಿ ಗಣಿಗಳನ್ನು ತೋಡಿ ಚಿನ್ನವನ್ನು ಸಂಗ್ರಹಸಿದ್ದಾರೆ. ಈ ಪ್ರಾಚೀನ ಗಣಿಗಳನ್ನು ಆಧರಿಸಿ ಇಂಡಿಯನ್ ಮೈನ್ಸ್ ಡೆವಲಪ್‍ಮೆಂಟ್ ಸಿಂಡಿಕೇಟ್ ಸಂಸ್ಥೆ ಅನೇಕ ಸುರಂಗಗಳನ್ನು ತೆಗೆದು 1907ರಿಂದ 1908ರ ವರೆಗೆ ಗಣಿ ಕಾರ್ಯಾಚರಣೆ ನಡೆಸಿತು. ಇಲ್ಲಿ 90 ಮೀಟರು ಆಳದವರೆಗೆ ಗಣಿಗಳು ಇಳಿದಿವೆ. ಗವಿ ಗುಡ್ಡ ಎಂಬ ಬೆಟ್ಟದ ಮೇಲೆ ಚಿನ್ನದ ಗಣಿಗಳಿವೆ. ಯೂರೋಪಿನ ಸಂಸ್ಥೆಗಳು ಪರಿಶೋದಿsಸಿ ಟನ್ನಿಗೆ 13.6 ಗ್ರಾಂ ಚಿನ್ನವಿರುವ ಅನೇಕ ವಲಯಗಳನ್ನು ಇಲ್ಲಿ ಗುರುತಿಸಿದುವು. ಛಿದ್ರವಾಗಿರುವ ಪಟ್ಟೆ ಕಬ್ಬಿಣ ಶಿಲೆಯಲ್ಲಿ ಬೆಣಚಿನ ಸಿರಗಳು ಮತ್ತು ಕಾರ್ಬೊನೇಟ್ ಅಂಶವಿರುವ ಭಾಗಗಳು ಸ್ವರ್ಣಭರಿತವಾಗಿವೆ. ಇಲ್ಲಿ ಚಿನ್ನವಿರುವ ಸುಮಾರು ಆರು ಸಮಾಂತರ ವಲಯಗಳನ್ನು ಗುರುತಿಸಲಾಗಿದೆ.. ಇಲ್ಲಿ ಚಿನ್ನವು ಪಿರ್ಹೋಟೈಟ್, ಆರ್ಸೆನೋ ಪೈರೈಟ್, ಚಾಲ್ಕೋಪೈರೈಟ್ ಖನಿಜಗಳೊಂದಿಗೆ ದೊರೆಯುತ್ತದೆ. ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಸಂಸ್ಥೆ ಈಚೆಗೆ ದೊಡ್ಡ ಪ್ರಮಾಣದಲ್ಲಿ ಇಲ್ಲಿ ಪರಿಶೋಧನೆ ನಡೆಸಿ, ಟನ್ನಿಗೆ 3.5 ಗ್ರಾಂ ಚಿನ್ನವಿರುವ 30 ಲಕ್ಷ ಟನ್ನು ಚಿನ್ನದ ಅದುರಿರುವುದಾಗಿ ವರದಿ ಮಾಡಿದೆ.

ಹಟ್ಟಿ ಚಿನ್ನದ ಕಂಪನಿ ಪ್ರಯೋಗಾರ್ಥವಾಗಿ ಇಲ್ಲಿ ತೆರೆದ ಗಣಿ ಕಾರ್ಯಾಚರಣೆ ಕೈಗೊಂಡಿದೆ. ಇಲ್ಲಿನ ಅದುರನ್ನು ಚಿತ್ರದುರ್ಗದ ತಾಮ್ರದ ಅದುರು ಸಂಸ್ಕರಿಸುವ ಘಟಕಕ್ಕೆ ಕಳಿಸಿ ಚಿನ್ನವನ್ನು ಸಂಸ್ಕರಣೆ ಮಾಡಲಾಗುತ್ತಿದೆ. 

ಕೆಂಪಿನಕೋಟೆ ಗಣಿಗಳು

ಹಾಸನ ಜಿಲ್ಲೆಯ ನುಗ್ಗೇಹಳ್ಳಿ ಪದರು ಶಿಲಾ ಪಟ್ಟಿಯಲ್ಲಿ ದಕ್ಷಿಣದ ತುದಿಯಲ್ಲಿರುವ ಕೆಂಪಿನಕೋಟೆ ಗ್ರಾಮದ ಬಳಿ ಪುರಾತನ ಚಿನ್ನದ ಗಣಿಗಳಿವೆ. ಬೆಂಗಳೂರು ಚನ್ನರಾಯಪಟ್ಟಣ ರಸ್ತೆಯಲ್ಲಿ ಮಟ್ಟನವಿಲೆ ಎಂಬ ಗ್ರಾಮದಿಂದಲೂ ಕೆಂಪಿನಕೋಟೆಯನ್ನು ಸಂಪರ್ಕಿಸಬಹುದು. ಕೆಂಪಿನಕೋಟೆ ಇಲ್ಲಿಂದ ಮೂರು ಕಿಲೋ ಮೀಟರು ಪಶ್ಚಿಮಕ್ಕಿದೆ. ಹಳೆಯ ಗಣಿಗಳ ಪೈಕಿ ಒಂದು 200 ಮೀಟರು ಉದ್ದವಿದೆ. ಏಷ್ಯದ ಪ್ರಾಚೀನ ಚಿನ್ನದ ಗಣಿಗಳ ಪೈಕಿ ಇದೇ ಅತ್ಯಂತ ದೊಡ್ಡದು ಎಂದು ರಾಬರ್ಟ್ ಬ್ರೂಸ್‍ಫುಟ್ ಎಂಬ ವಿಜ್ಞಾನಿ ಈ ಭಾಗವನ್ನು ಸಮೀಕ್ಷೆ ಮಾಡಿ 1986ರಲ್ಲಿ ವರದಿ ಮಾಡಿದ. ಈ ಗಣಿಗಳ ಕುರಿತು ಮೊದಲು ವರದಿ ಮಾಡಿದ ಲ್ಯಾವೆಲ್ಲರ್ ಎಂಬ ವಿಜ್ಞಾನಿ ಬಹುಶಃ 17ನೇ ಶತಮಾನದಲ್ಲಿ  ಚನ್ನರಾಯಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರರು ತಮ್ಮ ಟಂಕಸಾಲೆಗಾಗಿ ಈ ಗಣಿಗಳನ್ನು ನಿರ್ವಹಿಸುತ್ತಿದ್ದರೆಂದು ವರದಿ ಮಾಡಿದ್ದಾನೆ. 1893ರಿಂದ 1896ರವರೆಗೆ ಕೆಂಪಿನಕೋಟೆ ಗೋಲ್ಡ್ ಪಿsೀಲ್ಡ್ ಎಂಬ ಕಂಪನಿ 155 ಮೀಟರು ಆಳದವರೆಗೆ ಕೂಪವನ್ನು ತೋಡಿತ್ತು. ಇಲ್ಲಿ ಹಾರ್ನ್‍ಬ್ಲೆಂಡ್ ಮತ್ತು ಅಲ್ಟ್ರಾಮೆಪಿsಕ್ ಶಿಲೆಗಳ ಬೆಣಚಿನ ಎಳೆಗಳಲ್ಲಿ ಚಿನ್ನ ದೊರೆಯುತ್ತದೆ. ಹೆಚ್ಚು ಸಲ್ಫೈಡ್ ಖನಿಜಗಳು ಬೆರೆತಿಲ್ಲದಿರುವುದರಿಂದ ಚಿನ್ನವನ್ನು ಪ್ರತ್ಯೇಕಿಸುವುದು ಸುಲಭ. 1886ರಲ್ಲಿ ಪ್ರಾಯೋಗಿಕವಾಗಿ 1000 ಟನ್ನು ಅದುರನ್ನು ಅರೆದು, 1440 ಗ್ರಾಂ ಚಿನ್ನವನ್ನು ಸಾರೀಕರಿಸಲಾಗಿತ್ತು. 1890ರಲ್ಲಿ ಆರ್ಥಿಕ ಕೊರತೆಯಿಂದಾಗಿ ಗಣಿಯನ್ನು ಮುಚ್ಚಬೇಕಾಯಿತು. ಇತ್ತೀಚೆಗೆ ಭಾರತೀಯ ಭೂವೈಜ್ಞಾನಿಕ ಸವೇಕ್ಷಣ ಸಂಸ್ಥೆ ಮತ್ತು ಖನಿಜ ಪರಿಶೋಧನಾ ನಿಗಮ, ಸ್ವರ್ಣಭರಿತ ಸಿರಗಳ ವ್ಯಾಪ್ತಿಯನ್ನು ಅರಿಯಲು ಪರಿಶೋಧನಾ ಬೈರಿಗೆ ಕಾರ್ಯಾಚರಣೆ ನಡೆಸಿವೆ. ಕೆಂಪಿನಕೋಟೆ ಚಿನ್ನದ ಗಣಿಗಳಲ್ಲಿ ಟನ್ನಿಗೆ 7.46 ಗ್ರಾಂ ಚಿನ್ನವಿರುವ 3,32,000 ಟನ್ನು ಅದುರು ಇದೆ ಎಂದು ವರದಿ ಮಾಡಿದೆ. 

ಅಂಬಳೆ- ವಳಗೆರೆ ಗಣಿಗಳು

ಮೈಸೂರಿನ ನಂಜನಗೂಡು ತಾಲ್ಲೂಕಿನಲ್ಲಿರುವ ಅಂಬಳೆ-ವಳಗೆರೆ ಗಣಿಗಳು, ಗಾರ್ನೆಟ್ ಖನಿಜವಿರುವ ಆಂಪಿsಬೊಲೈಟ್ ಎಂಬ ರೂಪಾಂತರಿತ ಶಿಲೆಗಳಲ್ಲಿವೆ. ಅಂಬಳೆಯ ಬಳಿ ಪುರಾತನ ಗಣಿಗಳಿರುವುದನ್ನು 1895ರಲ್ಲಿ ಪತ್ತೆಹಚ್ಚಲಾಯಿತು. 1899 ಮತ್ತು 1901ರ ನಡುವೆ ಇಲ್ಲಿ ಕೂಪ ತೋಡಿ 60 ಮೀಟರು ಆಳಕ್ಕೆ ಗಣಿಗಳನ್ನು ಮಾಡಿದ್ದಾರೆ. ಬೆಣಚು ಸಿರದಲ್ಲಿ ಚಿನ್ನದ ಎಳೆಗಳಿದ್ದು, ಟನ್ನಿಗೆ 0.8 ರಿಂದ 7.7 ಗ್ರಾಂ ವರೆಗೆ ಲೋಹವನ್ನು ನೀಡಿದೆ. ಗಣಿ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಲಿಲ್ಲ. 

ಅಂಬಳೆಗೆ ಉತ್ತರಕ್ಕೆ ಅದೇ ಜಾಡಿನಲ್ಲಿ ನಾಲ್ಕು ಕಿಲೋ ಮೀಟರು ದೂರದಲ್ಲಿರುವ ವಳಗೆರೆ ಬಳಿ ಬಹು ದೊಡ್ಡ ತೆರೆದ ಗಣಿ ಇದೆ. ಇಲ್ಲಿ 30 ಮೀಟರು ಆಳಕ್ಕೆ ತೋಡಿದ ಕೂಪದಲ್ಲಿ ಉತ್ಕೃಷ್ಟ ದರ್ಜೆಯ ಅದುರು ದೊರೆತಿತ್ತು. 1905ರಲ್ಲಿ ಈ ಗಣಿಯನ್ನು ನಂಜನಗೂಡು ಗೋಲ್ಡ್ ಕಂಪನಿ ವಹಿಸಿಕೊಂಡಿತ್ತು. ಹೆಚ್ಚು ಸಲ್ಫೈಡ್ ಖನಿಜವಿರುವ ಸಿರ ಆಳದಲ್ಲಿ ಸುಮಾರು ಏಳು ಮೀಟರು ಅಗಲವಾಗಿದೆ ಎಂದು ತಿಳಿದು ಬಂದಿದೆ. ಟನ್ನಿಗೆ 9.6 ಗ್ರಾಂ ಚಿನ್ನವಿರುವ ಅದುರನ್ನು ಹಿಂದೆ ಇಲ್ಲಿ ಸಂಸ್ಕರಿಸಲಾಗಿದೆ. ಭಾರತೀಯ ಭೂವೈಜ್ಞಾನಿಕ ಸಂಸ್ಥೆ ಇಲ್ಲಿ ವ್ಯಾಪಕ ಗಣಿ ಪರಿಶೋಧನೆಯನ್ನು ಕೈಗೆತ್ತಿಕೊಂಡಿದೆ.

ಸಿದ್ದರಹಳ್ಳಿ

ಚಿಕ್ಕಮಗಳೂರು ಜಿಲ್ಲೆಯ ಸಿದ್ದರಹಳ್ಳಿಯ ಬಳಿ, ಅಷ್ಟೇನೂ ಎತ್ತರವಲ್ಲದ ಗುಡ್ಡದ ಮೇಲೆ 1907-09ರ ನಡುವೆ ಚಿನ್ನಕ್ಕಾಗಿ ಕೂಪ ತೋಡಿದ್ದಾರೆ. ಕ್ಲೋರೈಟ್ ಪದರ ಶಿಲೆಯನ್ನು ಹಾಯುವ ಬೆಣಚು ಕಲ್ಲಿನಲ್ಲಿ ಸುಮಾರು 30 ಮೀಟರು ಆಳದಲ್ಲಿ ತೋಡಿರುವ ಅಡ್ಡ ಸುರಂಗದಲ್ಲಿ ಸ್ವರ್ಣಭರಿತ ಶಿಲೆಗಳು ದೊರೆತಿವೆ. ಒಂದು ಟನ್ನು ಅದುರಿಗೆ ಆಗಿನ ವರದಿಯಂತೆ 14.7 ಗ್ರಾಂ ಚಿನ್ನವಿದೆ ಎಂದು ತಿಳಿದುಬಂದಿದೆ. ಆಳ ಇಳಿದಂತೆ ಈ ಸ್ವರ್ಣಸಿರ ಕಿರಿದಾಗುತ್ತ ಬಂದಿದ್ದರಿಂದ 1913ರಲ್ಲಿ ಗಣಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು.

ನಂದಿ ಮತ್ತು ಸಿದ್ದರಹಳ್ಳಿಯ ನಡುವೆ ಎರಡು ಪ್ರಾಚೀನ ಚಿನ್ನದ ಗಣಿಗಳಿವೆ. ಒಂದು 40 ಮೀಟರು, ಇನ್ನೊಂದು 70 ಮೀಟರು ಆಳವಿದೆ. ಅಷ್ಟೇನೂ ಉತ್ಕøಷ್ಟ ದರ್ಜೆಯ ಅದುರು ದೊರೆಯದ ಕಾರಣ ಗಣಿ ಕಾರ್ಯಾಚರಣೆ ಉತ್ತೇಜನಕಾರಿಯಾಗಲಿಲ್ಲ. 

ಅಜ್ಜಂಪುರದ ಪಶ್ಚಿಮಕ್ಕೆ ನಾಲ್ಕು ಕಿಲೋ ಮೀಟರು ದೂರದಲ್ಲಿ ತರೀಕೆರೆ ಗ್ರಾನೈಟ್ ಇರುವ ಅಂಚಿನಲ್ಲಿ ಕ್ಲೋರೈಟ್ ಪದರ ಶಿಲೆಯಲ್ಲಿ ಎರಡು ಪ್ರಾಚೀನ ಗಣಿಗಳಿವೆ. ಒಂದರ ಹೆಸರು ಹೊನ್ನದೋಣಿ, ಇನ್ನೊಂದು ಹಕ್ಕಿದೋಣಿ. ನೂರು ಮೀಟರು ಆಳದವರೆಗೆ ತೋಡಿರುವ ಬಾಗಿದ ಕೂಪ ಹಕ್ಕಿ ದೋಣಿಯಲ್ಲಿದೆ. ಹಿಂದೆ ಈ ಗಣಿಗಳಿಂದ ಎಷ್ಟು ಚಿನ್ನ ಉತ್ಪಾದನೆಯಾಗಿದೆ ಎಂಬ ಬಗ್ಗೆ ಸ್ಪಷ್ಟ ವಿವರಗಳಿಲ್ಲ. 

ಕುದುರೆಕೊಂಡ ಪಲ್ಲವನಹಳ್ಳಿ ಗಣಿಗಳು

ಹೊನ್ನಾಳಿ-ಸವಳಂಗ ಹೆದ್ದಾರಿಯಲ್ಲಿರುವ ಕುದುರೆಕೊಂಡ ಮತ್ತು ಪಲ್ಲವನಹಳ್ಳಿ ಸುತ್ತಮುತ್ತ ಮೆಕ್ಕಲು ಚಿನ್ನ ದೊರೆಯುವುದರ ಬಗ್ಗೆ ಹಿಂದಿನಿಂದಲೂ ಸಾಕಷ್ಟು ವರದಿಗಳಿವೆ. 1880ರಿಂದ 1885ರ ವರೆಗೆ ಈ ಭಾಗದಲ್ಲಿ 80 ಮೀಟರು ಆಳದ ಕೂಪ ತೋಡಿ ಚಿನ್ನದ ಸಿರವನ್ನು ಗಣಿ ಮಾಡಲಾಗಿದೆ. ಹೊನ್ನಾಳಿ ಸ್ವರ್ಣಕ್ಷೇತ್ರ ಎಂದೇ ಈ ಭಾಗಕ್ಕೆ ಹೆಸರು. ಹೊನ್ನಾಳಿ ಗ್ರಾನೈಟ್ ಮತ್ತು ಈಶಾನ್ಯದಲ್ಲಿ ಸೌಲಂಗ ಗ್ರಾನೈಟ್ ನಡುವಿನ ಕ್ಲೋರೈಡ್ ಪದರ ಶಿಲೆಯಲ್ಲಿ ಸ್ವರ್ಣ ಸಿರಗಳು ಹಾಯ್ದಿವೆ. ಕುದುರೆಕೊಂಡ, ಪಲ್ಲವನಹಳ್ಳಿ, ಸುರಹೊನ್ನೆ, ನ್ಯಾಮತಿ ಭಾಗಗಳಲ್ಲಿ ಮಣ್ಣಿನಲ್ಲಿ ತೇಲಿದಂತೆ ಆಗಾಗ ಚಿನ್ನದ ಗಟ್ಟಿ ದೊರೆಯುತ್ತವೆ. ಕುದುರೆಕೊಂಡದ ಗಣಿಗಳನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಮುಚ್ಚಬೇಕಾಯಿತು. ಈ ಭಾಗದಿಂದ 2586 ಟನ್ನು ಬೆಣಚನ್ನು ಅರೆದು 16.421 ಕಿಲೋ ಗ್ರಾಂ ಚಿನ್ನವನ್ನು ಉತ್ಪಾದಿಸಲಾದೆ. 

ಹೊನ್ನೇಹಟ್ಟಿ ಗಣಿಗಳು

ಭದ್ರಾವತಿಯ ದಕ್ಷಿಣಕ್ಕೆ ಭದ್ರಾ ನದಿಗೆ ಸಮೀಪವಿರುವ ಹೊನ್ನೇಹಟ್ಟಿ ಹೆಸರೇ ತಿಳಿಸುವಂತೆ ಹೊನ್ನಿನ ಕ್ಷೇತ್ರ. 1887ರಿಂದ 1890ರ ವರೆಗೆ ಇಲ್ಲಿ ಚಿನ್ನಕ್ಕಾಗಿ ವ್ಯಾಪಕ ಪರಿಶೋಧನೆ ನಡೆಸಲಾಗಿದೆ. ಬೆಣಚು ಸಿರಗಳಲ್ಲಿ ಚಿನ್ನದೊಂದಿಗೆ ಪೈರೈಟ್ ಖನಿಜ ಬೆರೆತಿದ್ದು ಹೊನ್ನೇಗುಡ್ಡದ ಮೇಲೆ ಕೂಪಗಳನ್ನು ತೋಡಲಾಗಿದೆ. ಸ್ವರ್ಣಭರಿತ ಸಿರದಿಂದ ಸಂಗ್ರಹಿಸಿದ ಮಾದರಿಯಲ್ಲಿ ಟನ್ನಿಗೆ 4.3 ಗ್ರಾಂ ಚಿನ್ನವಿದ್ದುದಾಗಿ ವರದಿಗಳು ತಿಳಿಸುತ್ತವೆ.  ಬೆಟ್ಟದ ಪಾದದಲ್ಲೂ ಅನೇಕ ಪ್ರಾಚೀನ ಗಣಿಗಳಿವೆ. ಆದರೆ ಇವು ಅಷ್ಟೇನೂ ಆಳವಲ್ಲ. ಸಣ್ಣ ಪ್ರಮಾಣದ ಗಣಿ ಕಾರ್ಯಾಚರಣೆಗೆ ಇವು ಯುಕ್ತವೆಂದು ತಜ್ಞರು ಶಿಫಾರಸು  ಮಾಡಿದ್ದಾರೆ.

ಜಾಲಗಾರ ಗುಂಡಿ 

ಸ್ಥಳನಾಮಗಳನ್ನು ಆಧಾರವಾಗಿಟ್ಟುಕೊಂಡು ಕೆಲವು ಸ್ಥಳಗಳನ್ನು ಪರಿಶೋಧಿಸಿದರೆ ಕರ್ನಾಟಕದ ಬಹಳಷ್ಟು ಸ್ಥಳಗಳಿಗೆ ಯುಕ್ತ ಹೆಸರನ್ನು ಪ್ರಾಚೀನರು ನೀಡಿರುವುದು ಸುಸ್ಪಷ್ಟ. ಇಂಥ ಹೆಸರುಗಳಲ್ಲಿ ಜಾಲಗಾರ ಗುಂಡಿಯೂ ಒಂದು. ಶಿವಮೊಗ್ಗ ಜಿಲ್ಲೆಯ ಈ ಸ್ಥಳ ಮೊದಲಿನಿಂದಲೂ ಚಿನ್ನ ಸೋಸುವ ಉದ್ಯಮದಲ್ಲಿ ಪರಿಚಿತ ಹೆಸರು. ಟಾಲ್ಕ್ ಪದರ ಶಿಲೆಯಲ್ಲಿ 70 ಮೀಟರು ಆಳಕ್ಕೆ ತೋಡಿರುವ ಗಣಿಗಳು ಇಲ್ಲಿವೆ. ಈ ಶಿಲೆಗಳನ್ನು ಹಾಯ್ದಿರುವ ಸಿರ ಬೆಣಚುಯುಕ್ತವಾಗಿವೆ. 1913ರಲ್ಲಿ ಇಲ್ಲಿ ಸಣ್ಣ ಪ್ರಮಾಣದ ಗಣಿ ಕಾರ್ಯಾಚರಣೆ ಮಾಡಿದಾಗ ಪ್ರತಿ ಟನ್ನು ಅದುರಿನಲ್ಲಿ 15.5 ಗ್ರಾಂ ಚಿನ್ನವಿರುವುದಾಗಿ ತಿಳಿಯಿತು. ಸ್ವರ್ಣಸಿರದ ಜೊತೆಗೆ ಕ್ಯಾಲ್ಸೆ ೈಟ್, ಕ್ಲೋರೈಟ್, ಪಟ್ಟೆರೂಪದ ಬೆಣಚು ಪದರ ಶಿಲೆ, ಕಬ್ಬಿಣದ ಆಕೈಡ್ ಬೆರೆತಿದೆ. ಇದರಲ್ಲಿರುವ ಪೈರೈಟ್ ಖನಿಜದಲ್ಲೂ ಚಿನ್ನವಿರುವುದಾಗಿಯೂ ತಿಳಿದು ಬಂದಿದೆ. 

ಭದ್ರಾ ಜಲಾಶಯ ತುಂಬಿ ಬಂದಾಗ ಇಲ್ಲಿನ ಕೂಪಗಳ ಕಂಠದ ಮಟ್ಟದವರೆಗೂ ನೀರು ತುಂಬಿಕೊಳ್ಳುತ್ತದೆ. ಮುಳುಗಡೆ ಪ್ರದೇಶವಾದುದರಿಂದ ಚಿನ್ನದ ಗಣಿ ಕಾರ್ಯಾಚರಣೆ ನಡೆಸುವುದು ಕಷ್ಟಕರ.

ಮೂಕನಗವಿ ಗಣಿಗಳು

ಗುಲ್ಬರ್ಗಾ ಜಿಲ್ಲೆಯ ಕೃಷ್ಣಾನದಿಯ ಉತ್ತರಕ್ಕೆ ಮತ್ತು ಸುರಪುರದ ಪಶ್ಚಿಮಕ್ಕೆ ಅನೇಕ ಪ್ರಾಚೀನ ಚಿನ್ನದ ಗಣಿಗಳಿವೆ. ಮಂಗಳೂರಿನಿಂದ ವಾಯುವ್ಯಕ್ಕೆ ಐದು ಕಿಲೋಮೀಟರು ದೂರದಲ್ಲಿರುವ ಮೂಕನಗವಿ ಗಣಿ ತುಂಬ ಪ್ರಸಿದ್ಧ. ಇಲ್ಲಿ, ಛಿದ್ರವಾಗಿರುವ ಆಂಫಿಬೋಲೈಟ್ ಎಂಬ ರೂಪಾಂತರಿತ ಅಗ್ನಿಶಿಲೆಗಳಲ್ಲಿ ಹಾಯುವ ಬೆಣಚು ಶಿಲೆಗಳಲ್ಲಿ ಚಿನ್ನ ಸಂಗ್ರಹವಾಗಿದೆ. ಚಿನ್ನದೊಡನೆ ಪೈರೈಟ್, ಪಿರ್ಹೋಟೈಟ್ ಮತ್ತು ಆರ್ಸೆನೋಪೈರೈಟ್ ಖನಿಜಗಳು ಬೆರೆತಿವೆ. ಸುಮಾರು 600 ಮೀಟರು ಉದ್ದದವರೆಗೆ ಸ್ವರ್ಣಸಿರ ವಿಸ್ತರಿಸಿದೆ. 1980-94ರ ನಡುವೆ ಹಟ್ಟಿ ಚಿನ್ನದ ಗಣಿ ಸಂಸ್ಥೆ ಈ ಭಾಗವನ್ನು ಪರಿಶೋಧಿಸಿ 32,087 ಟನ್ನು ಅದುರನ್ನು ಸಾಗಿಸಿ ಹಟ್ಟಿಯ ಸ್ಥಾವರದಲ್ಲಿ ಸಂಸ್ಕರಿಸಿ 117.44 ಕಿಲೋ ಗ್ರಾಂ ಚಿನ್ನವನ್ನು ಸಾರೀಕರಿಸಿತು. 

ಭಾರತದ ಚಿನ್ನದ ಉತ್ಪಾದನೆ 1997-98 ಮತ್ತು 1998-99 ( ಜಿಲ್ಲಾವಾರು ಮತ್ತು  ವಲಯವಾರು)

(ಪ್ರಮಾಣ : ಕಿ.ಗ್ರಾಂ , ಮೌಲ್ಯ = 1,000 ರೂ.ಗಳಲ್ಲಿ)

                           1997-98                              1998-99
ರಾಜ್ಯ/ಜಿಲ್ಲೆ
ಗಣಿಗಳು
ಪ್ರಮಾಣ
ಮೌಲ್ಯ
ಗಣಿಗಳು
ಪ್ರಮಾಣ
ಮೌಲ್ಯ

ಭಾರತ
8
2,636
13,66,879
7
2,463
13,03,112

ಸರ್ಕಾರಿ 
8
2,636
13,66,879
7
2,463
13.03,112

ಖಾಸಗಿ
-
-
-
-
-
-

ರಾಜ್ಯ

ಮೂಲ ಚಿನ್ನ

 ಒಟ್ಟು
8
1,952
11,12,252
7
1,958
11,26,890

ಆಂಧ್ರಪ್ರದೇಶ
4
193
2,15,138
3
225
2,50,066

ಅನಂತಪುರ
1
38
41,830
1
43
48,221

ಚಿತ್ತೂರ್
3
155
1,73,308
2
182
2,01,845

ಕರ್ನಾಟಕ
4
1,759
8,97,114
4
1,733
8,76,824

ಕೋಲಾರ
2
321
3,56,673
2
306
3,40,505

ರಾಯಚೂರು
2
1,438
5,40,441
2
1.427
5.36.319

ದ್ವೀತಿಯಕ ಚಿನ್ನ

 ಒಟ್ಟು
-
684
2,54,627
-
505
1,76,222

ಬಿಹಾರ್
-
684
2,,54,627
-
505
1,76,222

ಪೂರ್ವಸಿಂಘಭೂಮ್
-
684
2,54,627
-
505
1,76,222

ಭಾರತದ ಚಿನ್ನದ ಉತ್ಪಾದನೆ 1997-98 ಮತ್ತು 1998-99 ( ಜಿಲ್ಲಾವಾರು ಮತ್ತು  ವಲಯವಾರು)
 (ಪ್ರಮಾಣ : ಕಿ.ಗ್ರಾಂ , ಮೌಲ್ಯ = 1,000 ರೂ.ಗಳಲ್ಲಿ)
                           1997-98                              1998-99
ರಾಜ್ಯ/ಜಿಲ್ಲೆ
ಗಣಿಗಳು
ಪ್ರಮಾಣ
ಮೌಲ್ಯ
ಗಣಿಗಳು
ಪ್ರಮಾಣ
ಮೌಲ್ಯ

ಭಾರತ
8
2,636
13,66,879
7
2,463
13,03,112

ಸರ್ಕಾರಿ 
8
2,636
13,66,879
7
2,463
13.03,112

ಖಾಸಗಿ
-
-
-
-
-
-

ರಾಜ್ಯ

ಮೂಲ ಚಿನ್ನ

 ಒಟ್ಟು
8
1,952
11,12,252
7
1,958
11,26,890

ಆಂಧ್ರಪ್ರದೇಶ
4
193
2,15,138
3
225
2,50,066

ಅನಂತಪುರ
1
38
41,830
1
43
48,221

ಚಿತ್ತೂರ್
3
155
1,73,308
2
182
2,01,845

ಕರ್ನಾಟಕ
4
1,759
8,97,114
4
1,733
8,76,824

ಕೋಲಾರ
2
321
3,56,673
2
306
3,40,505

ರಾಯಚೂರು
2
1,438
5,40,441
2
1.427
5.36.319

ದ್ವೀತಿಯಕ ಚಿನ್ನ

 ಒಟ್ಟು
-
684
2,54,627
-
505
1,76,222

ಬಿಹಾರ್
-
684
2,,54,627
-
505
1,76,222

ಪೂರ್ವಸಿಂಘಭೂಮ್
-
684
2,54,627
-
505
1,76,222

ಚಿನ್ನದ ಪರಿಶುದ್ಧತೆ

ಚಿನ್ನದ ಪರಿಶುದ್ಧತೆಯನ್ನು ಅಳೆಯಲು ಕ್ಯಾರೆಟ್ ಎಂಬ ಮಾನವನ್ನು ಬಳಸುತ್ತೇವೆ. ಗುಲಗಂಜಿಯನ್ನು ನಮ್ಮಲ್ಲಿ ಚಿನ್ನದ ತೂಕ ಮಾಡಲು ಬಹು ಹಿಂದಿನಿಂದಲೂ ಅಕ್ಕಸಾಲಿಗರು ಬಳಸುತ್ತ ಬಂದಿದ್ದಾರೆ. ಮಧ್ಯಯುಗದಿಂದಲೂ ಯೂರೋಪಿನಲ್ಲಿ ಕ್ಯಾರೋಬ್ ಮರದ ಬೀಜ ಬಳಸಿ ಚಿನ್ನವನ್ನು ತೂಕ ಮಾಡುತ್ತಿದ್ದುದುಂಟು. ಕ್ಯಾರೆಟ್ ಎಂಬ ಪದ ಇದರಿಂದ ನಿಶ್ಪತ್ತಿಯಾಗಿದೆ. ಕ್ಯಾರೆಟ್ ಎಂದರೆ ಈಗ ಇಷ್ಟು ಗುಲಗಂಜಿ ತೂಕ ಎಂಬ ಅರ್ಥವಲ್ಲ. ಚಿನ್ನದ ಪರಿಶುದ್ಧತೆಯ ಪ್ರಮಾಣ. ಪರಿಶುದ್ಧ ಚಿನ್ನವನ್ನು 24 ಕ್ಯಾರೆಟ್ ಎನ್ನುತ್ತಾರೆ. ಆದರೆ ನಿಸರ್ಗದಲ್ಲೂ ಪರಿಶುದ್ಧ ಚಿನ್ನ ದೊರೆಯುವುದಿಲ್ಲ. ಅಪರಂಜಿ ಚಿನ್ನವೂ 24 ಕ್ಯಾರೆಟ್ ಇರುವುದಿಲ್ಲ. ಸ್ವಲ್ಪ ಪ್ರಮಾಣದ ಇತರ ಲೋಹಗಳೂ ಬೆರೆತಿರುತ್ತವೆ. 24 ಕ್ಯಾರೆಟ್ ಎಂದರೆ 22 ಭಾಗ ಚಿನ್ನ ಉಳಿದ 2 ಭಾಗ ತಾಮ್ರ, ಬೆಳ್ಳಿ, ಸತುವು, ಪ್ಲಾಟಿನಮ್ ಪೆಲ್ಲಾಡಿಯಮ್ ಈ ಯಾವುದೇ ಧಾತುಗಳಿಂದ ಕೂಡಿರಬಹುದು ಇಲ್ಲವೇ ಆಭರಣ ತಯಾರಕರು ಈ ಧಾತುಗಳನ್ನು ಮಿಶ್ರಣ ಮಾಡುತ್ತಾರೆ. ಏಕೆಂದರೆ ಅಪರಂಜಿ ಚಿನ್ನ ತುಂಬ ಮೃದು. ಚಾಕುವಿನಿಂದ ಗೀರಬಹುದು ಅಂತಹ ಚಿನ್ನದಿಂದ ನೇರವಾಗಿ ಆಭರಣ ತಯಾರಿಸಲಾಗುವುದಿಲ್ಲ. 

ಸಾಮಾನ್ಯವಾಗಿ ಆಭರಣಕ್ಕಾಗಿ 22 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಬಳಸುತ್ತಾರೆ. ಚಿನ್ನದಲ್ಲಿ ಬೆಳ್ಳಿಯ ಪ್ರಮಾಣ ಹೆಚ್ಚಿದಷ್ಟೂ ಅದು ಬಿಳಿ ಚಿನ್ನವಾಗುತ್ತದೆ (ಎಲೆಕ್ಟ್ರಮ್) ಹಾಗೆಯೇ ಬಿಸ್ಮತ್ ಬೆರೆತಿದ್ದರೆ ಅದು ಕಪ್ಪು ಚಿನ್ನ.

(ಪರಿಷ್ಕರಣೆ: ಟಿ. ಆರ್. ಅನಂತರಾಮು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ